'ಟಾಕ್ಸಿಕ್' ಹಾಗೂ 'ಹಾಯ್' ಸಿನಿಮಾಗಳ ಬಳಿಕ ನಯನತಾರ ನಟನೆಯ 'ಮೂಕುತಿ ಅಮ್ಮನ್ -2' ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ದೀಪಾವಳಿ ಸಂಭ್ರಮದಲ್ಲಿ ಈ ಫ್ಯಾಂಟಸಿ ಎಂಟರ್‌ಟೈನರ್ ಸಿನಿಮಾ ಬಿಡುಗಡೆ ಆಗಲಿದೆ. ಸದ್ಯ ಟೀಸರ್ ಬಿಡುಗಡೆ ಆಗಿ ಸದ್ದು ಮಾಡ್ತಿದೆ. ಚಿತ್ರದಲ್ಲಿ ಕನ್ನಡ ನಟ ದುನಿಯಾ ವಿಜಯ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಗಣೇಶ ಹಬ್ಬದ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ದಿನಾಂಕ ಕೂಡ ಘೋಷಣೆಯಾಗಿದೆ. 'ಮೂಕುತಿ ಅಮ್ಮನ್- 2' ಚಿತ್ರಕ್ಕೆ ಸುಂದರ್ ಸಿ ಆಕ್ಷನ್ ಕಟ್ ಹೇಳಿದ್ದಾರೆ. ಊರ್ವಶಿ, ರೆಗಿನ ಕಸೆಂದ್ರಾ, ಯೋಗಿ ಬಾಬು, ಗರುಡ ರಾಮ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ತೆಲುಗಿಗೆ ಸಿನಿಮಾ ಡಬ್ ಆಗಿ ಬರಲಿದೆ. ನವೆಂಬರ್ 6ರಂದು ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. ದುನಿಯಾ ಈಗಾಗಲೇ ಪರಭಾಷಾ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದಾರೆ. ಬಾಲಕೃಷ್ಣ ನಟನೆಯ 'ವೀರಸಿಂಹ ರೆಡ್ಡಿ' ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಅಬ್ಬರಿಸಿದ್ದರು. 'ಮೂಕುತಿ ಅಮ್ಮನ್- 2' ಅಂಥದ್ದೇ ಪಾತ್ರ ಸಿಕ್ಕಿದೆ.

ಪುನಿ ಜಗನ್ನಾಥ್ ನಿರ್ದೇಶನದ 'ಸ್ಲಂ ಡಾಗ್' ಚಿತ್ರದಲ್ಲಿ ಕೂಡ ವಿಲನ್ ಆಗಿ ವಿಜಯ್ ಅಬ್ಬರಿಸಿರುವುದು ಗೊತ್ತೇಯಿದೆ. ಕನ್ನಡದಲ್ಲಿ 'ಸಿಟಿಲೈಟ್ಸ್' ಸಿನಿಮಾ ನಿರ್ದೇಶನ ಮಾಡಿ ತೆರೆಗೆ ತರಲು ಅವರು ಸಜ್ಜಾಗಿದ್ದಾರೆ. 'ಸಲಗ' ಹಾಗೂ 'ಭೀಮ' ಬಳಿಕ ಅವರು ನಿರ್ದೇಶನ ಮಾಡುತ್ತಿರುವ ಮೂರನೇ ಸಿನಿಮಾ 'ಸಿಟಿಲೈಟ್ಸ್'. ಇನ್ನು 'ಮೂಕುತಿ ಅಮ್ಮನ್' ಹೆಸರಿನಲ್ಲಿ ಆರ್‌. ಜೆ ಬಾಲಾಜಿ ನಿರ್ದೇಶನದ ಸಿನಿಮಾ ಹಿಟ್ ಆಗಿತ್ತು. ಅದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಬರ್ತಿದೆ.

ಹಿಂದಿನ ಚಿತ್ರಕ್ಕೂ ಹೊಸ ಚಿತ್ರಕ್ಕೂ ಹೆಚ್ಚು ಸಂಬಂಧ ಇಲ್ಲ ಎನ್ನುವುದು ಟೀಸರ್ ನೋಡಿದರೆ ಅರ್ಥವಾಗುತ್ತದೆ. 'ಮೂಕುತಿ ಅಮ್ಮನ್' ಹಿನ್ನೆಲೆ ಬಗ್ಗೆ ಹೇಳಲು ಒಂದು ಕಥೆಯನ್ನು ಕಟ್ಟಿಕೊಡಲಾಗಿದೆ. ಸಾಮ್ರಾಜ್ಯವೊಂದರ ರಾಣಿಯ ಮಗುವಿಗೆ ಸಂಕಷ್ಟ ಎದುರಾಗಿದೆ. ಆಕೆ ರಕ್ಷಣೆ ಕೋರಿ ದೇವರ ಮೊರೆ ಹೋಗಿ ತನ್ನ ಪ್ರಾಣವನ್ನೇ ಅರ್ಪಿಸುತ್ತಾಳೆ. ಬಳಿಕ ರಾಜಕುಮಾರನ ರಕ್ಷಣೆಗೆ ಮೂಕುತಿ ಅಮ್ಮನ್ ಬರುವ ಕಥೆ ಚಿತ್ರದಲ್ಲಿದೆ. VELS ಫಿಲ್ಮ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ಡಾ. ಇಶಾರಿ ಕೆ. ಗಣೇಶ್ ಎಂಬುವವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಹಿಪ್‌ಹಾಪ್ ತಮಿಳ ತಂಡದ ಸಂಗೀತ 'ಮೂಕುತಿ ಅಮ್ಮನ್'-2 ಚಿತ್ರಕ್ಕಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಟೀಸರ್ ಮೂಡಿ ಬಂದಿಲ್ಲ. ಗ್ರಾಫಿಕ್ಸ್ ಬಗ್ಗೆ ಸಿನಿರಸಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕಿರುತೆರೆಯಲ್ಲಿ ಇದಕ್ಕಿಂತ ಚೆನ್ನಾಗಿ ಪೌರಾಣಿಕ ಧಾರಾವಾಹಿ ಬರುತ್ತದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಚಿತ್ರದ ಟೀಸರ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.