ನಟ, ನಿರ್ಮಾಪಕ, ನಿರ್ದೇಶಕ ದಿಲೀಪ್ ರಾಜ್ ಅಗಲಿಕೆ ನೋವು ಆಪ್ತರನ್ನು, ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಬಹಳ ಬೇಗ ದಿಲೀಪ್ ಇಹಲೋಕ ತ್ಯಜಿಸಿ ಹೊರಟುಬಿಟ್ಟರು. ಅವರ ಬಗ್ಗೆ ಬಹಳ ಆತ್ಮೀಯ ಸ್ನೇಹಿತನಾಗಿದ್ದ ನವೀನ್ ಕೃಷ್ಣ ಮಾತನಾಡಿದ್ದಾರೆ. ಯಾರು ದೂರ ಹೋದಾಗಲೂ ನಾನು ಅಷ್ಟು ದುಃಖಿಸಲಿಲ್ಲ. ಆದರೆ ದಿಲೀಪ್ ಇನ್ನಿಲ್ಲ ಅಂದಾಗ ಕುಸಿದು ಹೋಗಿದ್ದೆ ಎಂದು ನವೀನ್ ಕೃಷ್ಣ ಹೇಳಿದ್ದಾರೆ.
ನವೀನ್ ಹಾಗೂ ದಿಲೀಪ್ ಒಬ್ಬರನ್ನು ಒಬ್ಬರು ಬಹಳ ಅರ್ಥ ಮಾಡಿಕೊಂಡಿದ್ದರು. ನವೀನ್ ಧಾರಾವಾಹಿ ನಿರ್ದೇಶನ ಮಾಡುವಂತೆ ಹುರಿದುಂಬಿಸಿದ್ದು ಇದೇ ದಿಲೀಪ್ ರಾಜ್. 'ನ್ಯೂಸೋ ನ್ಯೂಸು' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನವೀನ್ ಕೃಷ್ಣ ತಮ್ಮ ಜೀವನದ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ದಿಲೀಪ್ ರಾಜ್ ಸ್ನೇಹದ ಬಗ್ಗೆಯೂ ಮಾತನಾಡಿದ್ದಾರೆ. ಅವನಿಲ್ಲ ಎನ್ನುವುದನ್ನು ಈ ಕ್ಷಣಕ್ಕೂ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲೇ ಇಲ್ಲೋ ಹೋಗಿದ್ದಾನೆ ಮತ್ತೆ ಬರ್ತಾನೆ ಎಂದುಕೊಂಡೇ ಇದ್ದೀನಿ ಎಂದಿದ್ದಾರೆ.
ತಮ್ಮಿಬ್ಬರ ಸ್ನೇಹದ ಬಗ್ಗೆ ಮಾತನಾಡುತ್ತಾ ತಮ್ಮ ಲವ್ ಸ್ಟೋರಿ ದಿನಗಳನ್ನು ನವೀನ್ ಕೃಷ್ಣ ನೆನಪಿಸಿಕೊಂಡಿದ್ದಾರೆ. ಶ್ರೀನಿವಾಸ್ ಮೂರ್ತಿ ಅವರ ಮಗ ನವೀನ್ ಕೃಷ್ಣ ತಂದೆ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದವರು. 'ಧಿಮಾಕು' ಎಂಬ ಸಿನಿಮಾ ನಿರ್ಮಿಸಿ ನಟಿಸಿ ಸೋತರು. ಬಳಿಕ ಕುಟುಂಬ ಸಾಲದ ಸುಳಿಗೆ ಸಿಲುಕಿ ಸಂಕಷ್ಟಪಡುವಂತಾಗಿತ್ತು. ಅಶ್ವಿನಿ ಎಂಬುವವರನ್ನು ಪ್ರೀತಿಸಿ ನವೀನ್ ಮದುವೆ ಆಗಿದ್ದಾರೆ. ಇನ್ನು ವಿದ್ಯಾ ಹಾಗೂ ದಿಲೀಪ್ ರಾಜ್ ಲವ್ ಸ್ಟೋರಿ ಗೊತ್ತೇಯಿದೆ.
ನನಗೂ, ದಿಲೀಪ್‌ಗೆ ಸೌಮ್ಯ ಎಂಬ ಕಾಮನ್ ಫ್ರೆಂಡ್ ಇದ್ರು. ಅವರ ಮನೆಯಲ್ಲಿ ನಾನು ಹಾಗೂ ಅಶ್ವಿನಿ, ದಿಲೀಪ್ ರಾಜ್ ಹಾಗೂ ವಿದ್ಯಾ ಸೀಕ್ರೆಟ್ ಆಗಿ ಸೇರುತ್ತಿದ್ದೆವು. ನಮ್ಮ ಮನೆಗಳಲ್ಲಿ ಪರಿಸ್ಥಿತಿ ಹೇಗಿತ್ತು ಅಂದ್ರೆ, ಪಾರ್ಕು, ಥಿಯೇಟರ್, ಹೋಟೆಲ್ ಅಂತ ಸುತ್ತಾಡಲು ಆಗ್ತಿರಲಿಲ್ಲ. ಹಾಗಾಗಿ ಸೌಮ್ಯ ಅವರ ಮನೆಯಲ್ಲಿ ಸೇರುತ್ತಿದ್ದೆವು. ಅದೇ ಸಮಯದಲ್ಲಿ ನಾನು- ದಿಲೀಪ್ ಕ್ಲೋಸ್ ಆದಂತೆ ಅಶ್ವಿನಿ ಹಾಗೂ ವಿದ್ಯಾ ಕೂಡ ಕ್ಲೋಸ್ ಆದ್ರು ಎಂದು ನವೀನ್ ಕೃಷ್ಣ ವಿವರಿಸಿದ್ದಾರೆ.
ಪ್ರತಿಭೆ ವಿಚಾರದಲ್ಲಿ ನಾನು, ದಿಲೀಪ್ ಹೆಚ್ಚು ಕಮ್ಮಿ ಸರಿ ಸಮಾನರು. ಈ ವಿಚಾರವನ್ನು ದಿಲೀಪ್ ಕೂಡ ಸಂದರ್ಶನಗಳಲ್ಲಿ ಹೇಳಿದ್ದಾನೆ. ಇಬ್ರು ಎತ್ತರಕ್ಕೆ ಬೆಳೆಯಬೇಕಿತ್ತು. ಸಾಧ್ಯವಾಗಲಲ್ಲ. ಅಲ್ಲಲ್ಲಿಗೆ ಮುಗಿದು ಹೋಯಿತು. ಆದರೆ ನಿರ್ದೇಶಕ, ನಿರ್ಮಾಪಕನಾಗಿ ಅವ್ನು ಬದಲಾಗುತ್ತಾ ಹೋದ. ನನಗೆ ಅಂತಹ ಅವಕಾಶಗಳು ಕೂಡಿಬರಲಿಲ್ಲ ಎಂದು ನವೀನ್ ತಿಳಿಸಿದ್ದಾರೆ.