ಬಿಗ್‌ಬಾಸ್ ಖ್ಯಾತಿಯ ನಟಿ ಕಾವ್ಯಾ ಶೈವ ಮನೆಗೆ ಹಿರಿಯ ನಟ ನಾಗರಾಜ್ ಕೋಟೆ ಇತ್ತೀಚೆಗೆ ಭೇಟಿ ನೀಡಿದ್ದಾರೆ. ಕೃಷ್ಣ ಜನ್ಮಾಷ್ಟಮಿ ದಿನ ಆಕೆಯ ಮನೆಯಲ್ಲಿ ನಡೆದ ವಿಶೇಷ ಪೂಜಾ ಸಮಾರಂಭದಲ್ಲಿ 'ಕೆಂಡಸಂಪಿಗೆ' ಧಾರಾವಾಹಿ ತಂಡ ಭಾಗಿ ಆಗಿತ್ತು. ಹಿರಿಯ ನಟ ದೊಡ್ಡಣ್ಣ ಕೂಡ ಹಾಜರಿದ್ದರು. ಈ ಬಗ್ಗೆ ನಟ ನಾಗರಾಜ್ ಕೋಟೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ
ಅಂದಹಾಗೆ 'ಕೆಂಡಸಂಪಿಗೆ' ಧಾರಾವಾಹಿಯಲ್ಲಿ ನಾಯಕಿ ಸುಮನಾಳ ತಂದೆ ರಾಮಯ್ಯ ಪಾತ್ರದಲ್ಲಿ ನಾಗರಾಜ್ ಕೋಟೆ ನಟಿಸಿದ್ದರು. ಧಾರಾವಾಹಿ ಮುಗಿದರೂ ತಂಡದ ಜೊತೆಗೆ ಆತ್ಮೀಯ ಒಡನಾಟವಿದೆ. ಇವತ್ತಿಗೂ ಕಾವ್ಯಾ ತಮ್ಮನ್ನು ಅಪ್ಪಾಜಿ ಎಂದೇ ಪ್ರೀತಿಯಿಂದ ಕರೆಯುತ್ತಾರೆ ಎಂದು ಹಿಂದೆ ಒಮ್ಮೆ ಹೇಳಿಕೊಂಡಿದ್ದರು. ಜನ್ಮಾಷ್ಟಮಿ ದಿನ ಮತ್ತೆ ಎಲ್ಲರೂ ಭೇಟಿಯಾಗಿದ್ದನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ
ಬಹುಷಃ ನನ್ನ ನಟನೆಯ ಕೊನೆಯ ಧಾರಾವಾಹಿ "ಕೆಂಡ ಸಂಪಿಗೆ". ನನ್ನ ನಟನೆಯ ಹಿಂದಿನ ಎಲ್ಲಾ ಧಾರಾವಾಹಿ, ನಾಟಕ, ಸಿನಿಮಾ ಪಾತ್ರಕ್ಕಿಂತ, ಮನಸ್ಸಿಗೆ ತುಂಬಾ ಸಮಾಧಾನ ನೀಡಿದ ಪಾತ್ರ, ನಾಯಕಿಯ ತಂದೆ "ರಾಮಯ್ಯ" ಪಾತ್ರ, ಆ ಪಾತ್ರದಲ್ಲಿ ಭಾವುಕತೆ ಇತ್ತು, ತಮಾಷೆ ಇತ್ತು, ಹೋರಾಟ ಇತ್ತು, ಕೆಳವರ್ಗದ ಜನರ ವಿಷಾದದ ಕಥೆಯಿತ್ತು, ಬಡವ - ಶ್ರೀಮಂತರ ತಾಕಲಾಟವಿತ್ತು, ಇಂತಾ ಕಥೆ ನಾನು ಈ ಹಿಂದೆ ನಟಿಸಿದ್ದ "ಸಂಕ್ರಾಂತಿ" (1999) ಹಾಗೂ "ರಂಗೋಲಿ" (2006) ಈ ಧಾರಾವಾಹಿಗಳಲ್ಲೂ ಇತ್ತು. ಮತ್ತೆ ಅಂತಾ ಅಭೂತಪೂರ್ವ ಅನುಭವವಾಗಿದ್ದು ಈ "ಕೆಂಡಸಂಪಿಗೆ" (2022-23) ಧಾರಾವಾಹಿಯಲ್ಲಿ. ಆ ಧಾರಾವಾಹಿಯಲ್ಲಿ ನಟಿಸಿದ ಯಾವುದೇ ಕಲಾವಿದರು ಅಲ್ಲಲ್ಲಿ ಭೇಟಿಯಾದರೂ ಆ ನೆನಪು ಸಂಭ್ರಮಿಸುತ್ತದೆ. ಇಷ್ಟೇ ಜೀವನ... ಏನಂತೀರಿ ?