ಕನ್ನಡ ಚಿತ್ರರಂಗದ ನಾಲ್ವರು ಪ್ರತಿಭಾವಂತ ನಟಿಯರು ಒಟ್ಟಾಗಿ ನಟಿಸುತ್ತಿರುವ ಸಿನಿಮಾ 'ನಾಕು ತಂತಿ'. ಮಹೇಶ್ ರಾಜ್, ಗೌತಮ್ ಅನ್ವಿತ್, ಶಶಿಕುಮಾರ್ ವಿ ಮತ್ತು ಪ್ರೀತಮ್ ಶಿವಕುಮಾರ್ ಎಂಬ ನಾಲ್ವರು ನಿರ್ದೇಶಕರು ಒಂದಾಗಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಖುಷಿ ರವಿ, ರೋಷಿನಿ ಪ್ರಕಾಶ್, ಸಂಗೀತಾ ಭಟ್ ಹಾಗೂ ಸಿಂಧು ಶ್ರೀನಿವಾಸ ಮೂರ್ತಿ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಕಥೆಗೆ ತಕ್ಕಂತೆ ಗಟ್ಟಿ ಪಾತ್ರಗಳು, ಭಾವನಾತ್ಮಕ ತೀವ್ರತೆ ಹಾಗೂ ವಿಭಿನ್ನ ಆಯಾಮ ಚಿತ್ರದಲ್ಲಿದೆ.

ನಾಲ್ವರು ನಿರ್ದೇಶಕರು ವಿಶಿಷ್ಟ ದೃಷ್ಟಿಕೋನ ಹಾಗೂ ಕಥಾ ನಿರೂಪಣೆಯನ್ನು ಒಗ್ಗೂಡಿಸಿ ಈ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ. ಜಯರಾಮ್ ದೇವಸಮುದ್ರ ನೇತೃತ್ವದ ಪ್ರತಿಷ್ಠಿತ 'ಸುರಮ್ ಮೂವೀಸ್' ಸಂಸ್ಥೆಯು ಯೋಗೇಶ್ ಬಸವೇಗೌಡ ಅವರ 'ಡಿಕೆಎಸ್ ಪ್ರೊಡಕ್ಷನ್ಸ್' ಹಾಗೂ ನಂಬೂರು ಸಾಯಿ ಅವರ 'ಸಾಯಿ ಬಿಂದು ಪ್ರೊಡಕ್ಷನ್' ಜಂಟಿಯಾಗಿ 'ನಾಕು ತಂತಿ' ಚಿತ್ರವನ್ನು ನಿರ್ಮಿಸುತ್ತಿದೆ. ಈಗಾಗಲೇ 'ಸುರಮ್ ಮೂವೀಸ್' ಸಂಸ್ಥೆ 'ನಿದ್ರಾದೇವಿ ನೆಕ್ಸ್ಟ್ ಡೋರ್', ಚೈತ್ರಾ ಆಚಾರ್ ಅಭಿನಯದ 'ಎಲ್‌ಎಸ್‌ಡಿ', 'ನೀ ನಂಗೆ ಅಲ್ಲವಾ' ಹಾಗೂ ಶ್ರೀಮುರಳಿ ನಟನೆಯ ಬಹುನಿರೀಕ್ಷಿತ 'ಉಗ್ರಾಯುಧಂ' ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಅದೇ ಸಾಲಿಗೆ ಈ ಸಿನಿಮಾ ಸೇರಿಕೊಂಡಿದೆ.

ಅಂದಹಾಗೆ 'ನಾಕು ತಂತಿ' ಚಿತ್ರಕ್ಕೆ ಸುಮೇಧ್ ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಸೊಗಡನ್ನು ಸೇರಿಸಿ ಸೈ ಎನಿಸಿಕೊಂಡಿರುವ ಸುಮೇಧ್, 'ಸು ಫ್ರಮ್ ಸೋ' ಚಿತ್ರಕ್ಕೆ ಟ್ಯೂನ್ ಹಾಕಿ ಗೆದ್ದಿದ್ದರು. ಈ ಚಿತ್ರಕ್ಕೂ ಸಂಗೀತದ ಬಲ ತುಂಬಲು ಅವರು ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರದ ಸಂಪೂರ್ಣ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯವಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ನಾಲ್ವರು ಪ್ರತಿಭಾನ್ವಿತ ನಟಿಯರ ಅದ್ಭುತ ನಟನೆ, ನಾಲ್ವರು ನಿರ್ದೇಶಕರ ವಿಭಿನ್ನ ಕಲ್ಪನೆಯಲ್ಲಿ ಸಿನಿಮಾ ಮೂಡಿಬರ್ತಿದೆ. ಈ ವರ್ಷವೇ ಸಿನಿಾ ತೆರೆಗೆ ತರುವ ಪ್ರಯತ್ನ ನಡೀತಿದೆ.