ಖ್ಯಾತ ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ಪುತ್ರ ಕಾಲಭೈರವ ಹಸೆಮಣೆ ಏರಲು ಸಜ್ಜಾಗುತ್ತಿದ್ದಾರೆ. ನಟಿ ಕಾವ್ಯಾ ಕಲ್ಯಾಣ್‌ರಾಮ್ ಜೊತೆ ಹೊಸ ಬಾಳಿಗೆ ಕಾಲಿಡಲು ಮನಸ್ಸು ಮಾಡಿದ್ದಾರೆ. ತಮ್ಮಿಬ್ಬರ ಪ್ರೇಮ್ ಕಹಾನಿಯನ್ನು ಜೋಡಿ ಖಚಿತಪಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
ಸಂಗೀತ ನಿರ್ದೇಶಕ, ಗಾಯಕ ಕಾಲಭೈರವ ಹಾಗೂ ನಟಿ ಕಾವ್ಯಾ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಗುಸುಗುಸು ಕೇಳಿ ಬರ್ತಿತ್ತು. ಇಬ್ಬರೂ ಕದ್ದು ಮುಚ್ಚಿ ಓಡಾಡುತ್ತಿದ್ದದ್ದು ಗುಟ್ಟಾಗಿ ಏನು ಉಳಿದಿರಲಿಲ್ಲ. ಇದೀಗ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದು ತಾವೇ ತಮ್ಮ ಪ್ರೀತಿ ವಿಚಾರ ಬಹಿರಂಗ ಪಡಿಸಿದ್ದಾರೆ. ಪೋಷಕರ ಒಪ್ಪಿಗೆ ಪಡೆದು ಹೊಸಬಾಳಿಗೆ ಕಾಲಿಡಲು ಅಣಿಯಾಗುತ್ತಿದ್ದಾರೆ. ಇಬ್ಬರ ಪೋಸ್ಟ್ ನೋಡಿ ಅಭಿಮಾನಿಗಳು, ಆಪ್ತರು ಕಾಮೆಂಟ್ ಮಾಡಿ ಕಂಗ್ರಾಟ್ಸ್ ಹೇಳುತ್ತಿದ್ದಾರೆ. ರಾಜಮೌಳಿ ಮನೆಯಲ್ಲಿ ಮತ್ತೊಂದು ಶುಭ ಸಮಾರಂಭಕ್ಕೆ ವೇದಿಕೆ ಸಜ್ಜಾಗುತ್ತಿದೆ.
ಎಂ. ಎಂ ಕೀರವಾಣಿ ಹಾಗೂ ನಿರ್ದೇಶಕ ರಾಜಮೌಳಿ ಸೋದರ ಸಂಬಂಧಿಗಳು. ಜಕ್ಕಣ್ಣ ನಿರ್ದೇಶನದ ಎಲ್ಲಾ ಸಿನಿಮಾಗಳಿಗೆ ಕೀರವಾಣಿ ಟ್ಯೂನ್ ಹಾಕಿದ್ದಾರೆ. ಮೌಳಿ ಸಿನಿಮಾಗಳಿಗೆ ಕಾಲಭೈರವ ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ಕೂಡ ಕೆಲ ಹಾಡುಗಳಿಗೆ ದನಿಯಾಗಿದ್ದಾರೆ. ದರ್ಶನ್ ನಟನೆಯ 'ಯಜಮಾನ' ಚಿತ್ರದ ಸೂಪರ್ ಹಿಟ್ 'ಶಿವನಂದಿ' ಹಾಡನ್ನು ಕಾಲಭೈರವ ಹಾಡಿದ್ದರು. 'ಆರೆಂಜ್' ಚಿತ್ರದ 'ಬ್ರದರು ಬ್ರದರು' ಕನ್ನಡದಲ್ಲಿ ಅವರು ಹಾಡಿದ್ದ ಮೊದಲ ಹಾಡಾಗಿತ್ತು.
ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಸಿನಿಮಾ ಆಲ್ಬಮ್‌ಗಾಗಿ ಕಾಲಭೈರವ ಕೆಲಸ ಮಾಡಿದ್ದರು. ಗಾಯಕರಾಗಿಯೂ ಗುರ್ತಿಸಿಕೊಂಡಿದ್ದರು. ಸಿನಿಮಾ ಕನ್ನಡಕ್ಕೂ ಡಬ್ ಆಗಿತ್ತು. ಹಾಗಾಗಿ ಕನ್ನಡ ಹಾಡುಗಳಿಗೂ ಅವರು ಬಲ ತುಂಬಿದ್ದರು. ಸಂಗೀತ ನಿರ್ದೇಶಕರಾಗಿ ಕೆಲ ಸಿನಿಮಾಗಳಿಗೆ ಕಾರ್ಯಕ್ರಮಗಳಿಗೆ ಕಾಲಭೈರವ ಕೆಲಸ ಮಾಡಿದ್ದಾರೆ. ಆಂಧ್ರ ಮೂಲದ ನಟಿ ಕಾವ್ಯಾ ಕಲ್ಯಾಣ್‌ರಾಮ್ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು. ಮೂರು ವರ್ಷಗಳ ಹಿಂದೆ ಬಂದ 'ಮಸೂದ' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು.
"ನಿನ್ನೊಂದಿಗೆ ಸಮಯ ಕಳೆಯುವುದು ಪರ್ವತಗಳ ಬಳಿ ಕುಳಿತು ನೀರಿನ ಹೊಳೆಯನ್ನು ನೋಡುವಂತೆ ನಿನ್ನೊಂದಿಗೆ ಕೆಲಸ ಮಾಡುವುದು ನೀವು ಮುಗಿಸಲು ಬಯಸದ ರಜೆಯಂತೆ ನಿನ್ನೊಂದಿಗೆ ಸಂಭಾಷಣೆ ಚಳಿಗಾಲದ ಮುಂಜಾನೆ ನನ್ನ ನೆಚ್ಚಿನ ಕಾಫಿ ಕುಡಿದಂತೆ ಭಾಸವಾಗುತ್ತದೆ. ನನಗೆ ಆ ಭಾವನೆಯನ್ನು ಹೆಸರಿಸಲು ಸಾಧ್ಯವಾಗಲಿಲ್ಲ. ನನಗೆ ಸಾಧ್ಯವಾಗಲಿಲ್ಲ. ಆದರೆ ನಮ್ಮ ಪ್ರಯಾಣದ ಉದ್ದಕ್ಕೂ ಎಲ್ಲೋ, ಅದು ಏನೆಂದು ನಾನು ಅಂತಿಮವಾಗಿ ಅರಿತುಕೊಂಡೆ. ಭಾವನೆ. ಅದು 'ಮನೆ'ಯ ಭಾವನೆ" ಎಂದು ಕಾವ್ಯಾ ಬಗ್ಗೆ ಕಾಲಭೈರವ ಬರೆದುಕೊಂಡಿದ್ದಾರೆ.
ಕಾವ್ಯಾ ಪೋಸ್ಟ್ ಮಾಡಿ "ಕೆಲವರು ನಮ್ಮ ಜೀವನದಲ್ಲಿ ಬಂದು ನಾವು ದೇವರ ಪ್ರೀತಿಯ ಮಗು ಎಂದು ಭಾವಿಸುವಂತೆ ಮಾಡುತ್ತಾರೆ. ನನ್ನ ದೈನಂದಿನ ದಿನಗಳನ್ನು ಬೆಳಗಿಸಿದ್ದಕ್ಕಾಗಿ ಮತ್ತು ನಾನು ಅತ್ಯಂತ ಅದೃಷ್ಟಶಾಲಿ ಹುಡುಗಿಯಂತೆ ಭಾವಿಸಿದ್ದಕ್ಕಾಗಿ ಧನ್ಯವಾದ. ನಾನು ಬೇಡ ಎಂದು ಹೇಳಿದ್ರು ನನಗೆ ಆ ಡಯಟ್ ಕೋಕ್ ಬೇಕು ಎಂದು ನೀವು ತಿಳಿದುಕೊಳ್ಳುವ ಹಲವು ವರ್ಷಗಳು ಇಲ್ಲಿವೆ.." ಎಂದು ಹಂಚಿಕೊಂಡಿದ್ದಾರೆ.