ತಮಿಳುನಾಡು ಸಿಎಂ ವಿಜಯ್ ಹಾಗೂ ನಟಿ ತ್ರಿಶಾ ಫ್ರೆಂಡ್‌ಶಿಪ್ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. ಇದೇ ಕಾರಣಕ್ಕೆ ವಿಜಯ್ ಸಾಂಸಾರಿಕ ಜೀವನ ಡಿವೋರ್ಸ್ ಹಂತಕ್ಕೆ ಹೋಗಿತ್ತು. ಪದೇ ಪದೆ ವಿಜಯ್ ಜೊತೆ ತ್ರಿಶಾ ಬಹಿರಂಗವಾಗಿ ಕಾಣಿಸಿಕೊಂಡು ಸುದ್ದಿ ಆಗಿತ್ತಿದ್ದಾರೆ. ಈ ಬಗ್ಗೆ ಬಹಿರಂಗವಾಗಿ ಏನನ್ನು ಮಾತನಾಡುತ್ತಿಲ್ಲ. ಕೆಲವರು ಇದು ಅವರಿಬ್ಬರ ವೈಯಕ್ತಿಕ ಎಂದು ಸುಮ್ಮನಾಗುತ್ತಿದ್ದಾರೆ. ಆದರೆ ಬಹುತೇಕರು ಇದು ತಪ್ಪು ಎಂದು ಕಾಮೆಂಟ್ ಮಾಡ್ತಿದ್ದಾರೆ.

ಮತ್ತೆ ವಿಜಯ್ ಹಾಗೂ ತ್ರಿಶಾ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಯುನೈಟೆಡ್ ಕಿಂಗ್‌ಡಮ್‌ನ ಸಿಲ್ವರ್‌ಸ್ಟೋನ್‌ನಲ್ಲಿ ನಡೆದ 'ಮಿಚೆಲಿನ್ ಲೆ ಮಾನ್ಸ್ ಕಪ್' ರೇಸ್‌ ನೋಡಲು ವಿಜಯ್ ತೆರಳಿದ್ದಾರೆ. ತಮಿಳು ನಟ ಅಜಿತ್ ಈ ರೇಸ್‌ನಲ್ಲಿ ಭಾಗಿ ಆಗಿದ್ದಾರೆ. ವಿಜಯ್ ಹಾಗೂ ಅಜಿತ್ ತಮಿಳು ಚಿತ್ರರಂಗದ ಸ್ಟಾರ್ ನಟರು. ಒಂದ್ಕಾಲದಲ್ಲಿ ಇಬ್ಬರ ನಡುವೆ ಸ್ಪರ್ಧೆ, ಪೈಪೋಟಿ ಇದೆ ಎಂದು ಚರ್ಚೆ ನಡೀತಿತ್ತು. ಆದರೆ ಇಬ್ಬರ ನಡುವೆ ಆತ್ಮೀಯ ಸ್ನೇಹ ಸಂಬಂಧವಿದೆ.

'ಮಿಚೆಲಿನ್ ಲೆ ಮೆನ್ಸ್ ಕಪ್' ರೇಸ್ ಟೂರ್ನಿಗೆ ಚಾಲನೆ ಕೊಡಲು ಸಿಎಂ ವಿಜಯ್‌ಗೆ ಆಹ್ವಾನ ಸಿಕ್ಕಿತ್ತು. ರೇಸ್ ಟ್ರ್ಯಾಕ್‌ನಲ್ಲಿ ಅಜಿತ್ ಹಾಗೂ ವಿಜಯ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪರಸ್ಪರ ತಬ್ಬಿಕೊಂಡು ಒಟ್ಟಿಗೆ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಆ ಫೋಟೊ, ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿ ಅಭಿಮಾನಿಗಳು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ವಿಜಯ್ ಹಾಗೂ ತ್ರಿಶಾ ಒಟ್ಟಿಗೆ ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

ವಿಜಯ್ ಮಾತ್ರವಲ್ಲ ನಟಿ ತ್ರಿಶಾ ಕೂಡ ಲಂಡನ್ ಪ್ರವಾಸದಲ್ಲಿದ್ದಾರೆ ಎನ್ನುವ ಗುಮಾನಿ ಇತ್ತು. ಇದೀಗ ಇಬ್ಬರೂ ಕಾರ್‌ ರೇಸ್ ನೋಡುತ್ತಾ ಬಾಲ್ಕನಿಯಲ್ಲಿ ಕಾಣಿಸಿಕೊಂಡಿರುವ ವೀಡಿಯೋ ವೈರಲ್ ಆಗ್ತಿದೆ. ಸಿಎಂ ವಿಜಯ್ ಹಾಗೂ ಶಾಸಕ ಆಧವ್ ಅರ್ಜುನ ಸ್ಟ್ಯಾಂಡ್‌ನಲ್ಲಿ ರೇಸ್ ನೋಡುತ್ತಾ ಎಲ್ಲರನ್ನು ಹುರಿದುಂಬಿಸುತ್ತಿದ್ರು. ಈ ವೇಳೆ ದಿಢೀರನೆ ನಟಿ ತ್ರಿಶಾ ಅಲ್ಲಿಗೆ ಬಂದುಬಿಟ್ಟಿದ್ದಾರೆ. ಅವರಿಬ್ಬರ ಜೊತೆ ರೇಸ್ ನೋಡಿ ಎಂಜಾಯ್ ಮಾಡಿದ್ದಾರೆ. ಇದ್ದಕ್ಕಿದಂತೆ ತ್ರಿಶಾ ಅಲ್ಲಿಗೆ ಬಂದಿದ್ದು ನೋಡಿ ವಿಜಯ್ ಒಂದು ಕ್ಷಣ ಅವಕ್ಕಾಗಿರುವಂತೆ ಕಾಣ್ತಿದೆ. ಸದ್ಯ ವೀಡಿಯೋ ಸಖತ್ ವೈರಲ್ ಆಗ್ತಿದೆ.

ರೇಸ್‌ನಲ್ಲಿ ಅಜಿತ್ ನೇತೃತ್ವದ ಟೀಮ್ ವಿರಾಜ್ ತಂಡ 3ನೇ ಸ್ಥಾನ ಪಡೆದು ಸಂಭ್ರಮಿಸಿದೆ. ನಟ ಅಜಿತ್ ಕೂಡ ಕಾರ್ ಏರಿ ರೇಸ್‌ನಲ್ಲಿ ಪಾಲ್ಗೊಂಡಿದ್ದು ವಿಶೇಷ. ನಟನೆಯ ಜೊತೆ ಬೈಕ್ ಹಾಗೂ ಕಾರ್ ಕ್ರೇಜ್ ಅಜಿತ್ ಅವರಿಗಿದೆ. ತಮ್ಮ ಬಿಡುವಿನ ಬಹುತೇಕ ಸಮಯವನ್ನು ಬೈಕ್ ಟ್ರಿಪ್, ಕಾರ್ ರೇಸ್‌ನಲ್ಲಿ ಅವರು ಕಳೆಯುತ್ತಾರೆ.