ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಟನೆಯ 'ಮ್ಯಾಂಗೋ ಪಚ್ಚ' ಸಿನಿಮಾ ಮೂರು ತಿಂಗಳ ಹಿಂದೆ ತೆರೆಗೆ ಬಂದಿತ್ತು. ಕೆಲವರು ಮೆಚ್ಚಿಕೊಂಡರೂ ದೊಡ್ಡದಾಗಿ ಸಿನಿಮಾ ಸದ್ದು ಮಾಡಿರಲಿಲ್ಲ. ಸಾಕಷ್ಟು ಜನ ಓಟಿಟಿಯಲ್ಲಿ ಸಿನಿಮಾ ವೀಕ್ಷಿಸಲು ಬಯಸಿದ್ದರು. ಆದರೆ ಮೂರು ತಿಂಗಳು ಕಳೆದರೂ ಆ ಅವಕಾಶ ಸಿಕ್ಕಿರಲಿಲ್ಲ. ಅಂತಿಮವಾಗಿ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಅಪ್‌ಡೇಟ್ ಬಂದಿದೆ.

ಸುಪ್ರಿಯಾನ್ವಿ ಪಿಕ್ಚರ್ಸ್ ಸ್ಟುಡಿಯೋ ಹಾಗೂ ಕೆಆರ್‌ಜಿ ಸ್ಟುಡಿಯೋ ಸಂಸ್ಥೆಗಳು ಜಂಟಿಯಾಗಿ 'ಮ್ಯಾಂಗೋ ಪಚ್ಚ' ಸಿನಿಮಾ ನಿರ್ಮಾಣ ಮಾಡಿದ್ದವು. ವಿವೇಕ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಮೈಸೂರು ಹಿನ್ನೆಲೆಯ ಕಥೆ ಚಿತ್ರದಲ್ಲಿತ್ತು. ಸಂಚಿತ್ ಜೊತೆ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದರು. ಮಯೂರ್ ಪಟೇಲ್, ಉಗ್ರಂ ಮಂಜು, ಹಂಸ ನಾರಾಯಣಸ್ವಾಮಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಜೂನ್ 5ರಂದು ತೆರೆಗೆ ಬಂದಿದ್ದ ಸಿನಿಮಾ ಗಣೇಶ ಹಬ್ಬದ ಸಂಭ್ರಮದಲ್ಲಿ ಸೆಪ್ಟೆಂಬರ್ 14 ರಂದು ಓಟಿಟಿಗೆ ಬರ್ತಿದೆ.

ಜಿಯೋ ಹಾಟ್‌ಸ್ಟರ್‌ನಲ್ಲಿ 'ಮ್ಯಾಂಗೋ ಪಚ್ಚ' ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಸಂಚಿತ್ ನಿರ್ದೇಶಿಸಿ ನಟಿಸಬೇಕಿದ್ದ 'ಜಿಮ್ಮಿ' ಸಿನಿಮಾ ನಿಂತ ಬಳಿಕ 'ಮ್ಯಾಂಗೋ ಪಚ್ಚ' ಶುರುವಾಗಿತ್ತು. ಕೊಂಚ ತಡವಾಗಿಯೇ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಸದ್ದು ಮಾಡಿರಲಿಲ್ಲ. ಓಟಿಟಿಯಲ್ಲಿ ಚಿತ್ರಕ್ಕೆ ಯಾವ ರೀತಿಯ ರೆಸ್ಪಾನ್ಸ್ ಸಿಗುತ್ತದೆ ಕಾದು ನೋಡಬೇಕಿದೆ.

ಪ್ರಶಾಂತ್ ಅಲಿಯಾಸ್ 'ಪಚ್ಚ' ಗಾಂಜಾ ದಂಧೆಗೆ ಇಳಿಯುವ ಕಥೆ 'ಮ್ಯಾಂಗೋ ಪಚ್ಚ' ಚಿತ್ರದಲ್ಲಿದೆ. 2000 ರಿಂದ 2010 ರವರೆಗೆ ಮೈಸೂರಿನಲ್ಲಿ ನಡೆದಿರುವ ನೈಜ ಘಟನೆಗಳನ್ನಾಧರಿ ನಿರ್ದೇಶಕ ವಿವೇಕ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ.