ಸಾವಿರ ಕೋಟಿ ಕೊಳ್ಳೆ ಹೊಡೆದು 'ರಾಮಾಯಣ' ಸಿನಿಮಾ ದಾಖಲೆ ಬರೆದಿದೆ. ಕೇವಲ 8 ದಿನಗಳಲ್ಲಿ ಈ ಸಾಧನೆ ಮಾಡಿರುವುದು ವಿಶೇಷ. ಪ್ರೇಕ್ಷಕರು ಮಾತ್ರವಲ್ಲದೇ ವಿಮರ್ಶಕರು ಕೂಡ ಸಿನಿಮಾ ನೋಡಿ ಕೊಂಡಾಡಿದ್ದಾರೆ. ನಿರ್ದೇಶಕರಾದ ಎಸ್. ಎಸ್ ರಾಜಮೌಳಿ, ರಾಮ್ ಗೋಪಾಲ್ ವರ್ಮಾ, ಶಂಕರ್ ಹಾಗೂ ನಟ ಮಹೇಶ್ ಬಾಬು ಸೇರಿದಂತೆ ಸಾಕಷ್ಟು ತಾರೆಯರು 'ರಾಮಾಯಣ' ಚಿತ್ರ ನೋಡಿ ಬಹುಪರಾಕ್ ಎಂದಿದ್ದಾರೆ. ಇದೀಗ ಮಹೇಶ್ ಬಾಬು ಮಗನ ರಿವ್ಯೂ ವೈರಲ್ ಆಗ್ತಿದೆ.
ಮಹೇಶ್ ಬಾಬು ಮಗ ಗೌತಮ್ ಘಟ್ಟಮನೇನಿ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾದಲ್ಲಿದ್ದಾನೆ. ಚಿತ್ರರಂಗ ಪ್ರವೇಶಿಸಲು ತಯಾರಿ ನಡೆಸಿದ್ದು ಅದಕ್ಕಾಗಿ ಎನ್ವೈಯು ಟಿಶ್ ಸ್ಕೂಲ್ ಆಫ್ ದಿ ಆರ್ಟ್ಸ್ನಲ್ಲಿ ನಾಲ್ಕು ವರ್ಷಗಳ ಡ್ರಾಮಾ & ಪರ್ಫಾಮಿಂಗ್ ಆರ್ಟ್ಸ್ ಕೋರ್ಸ್ ಅಧ್ಯಯನ ಮಾಡುತ್ತಿದ್ದಾನೆ. ಭಾರತದ ಸಿನಿಮಾಗಳನ್ನು ಅಲ್ಲೇ ವೀಕ್ಷಿಸಿ ಲೆಟರ್ ಬಾಕ್ಸ್ ಖಾತೆಯಲ್ಲಿ ರಿವ್ಯೂ ಮಾಡುತ್ತಾನೆ. ಯಶ್ ನಿರ್ಮಿಸಿ ನಟಿಸಿದ್ದ 'ಟಾಕ್ಸಿಕ್' ಚಿತ್ರಕ್ಕೆ ಕೇವಲ 0.5 ರೇಟಿಂಗ್ ಕೊಟ್ಟು ಟೀಕಿಸಿದ್ದ. ಈ ಬಗ್ಗೆ ಯಶ್ ಅಭಿಮಾನಿಗಳು ಬೇಸರಗೊಂಡಿದ್ದರು. ಇದೀಗ 'ರಾಮಾಯಣ' ಸಿನಿಮಾ ನೋಡಿ ಗೌತಮ್ ರಿವ್ಯೂ ಮಾಡಿದ್ದಾನೆ.
ಪ್ರಾಮಾಣಿಕವಾಗಿ ಹೇಳುವುದಾದರೆ, 'ರಾಮಾಯಣ' ಚಿತ್ರ ನನ್ನನ್ನು ಸಂಪೂರ್ಣವಾಗಿ ಮಂತ್ರಮುಗ್ಧಗೊಳಿಸಿದೆ. ಚಿತ್ರದ ಸಿಜಿಐ (CGI), ನಿರ್ದೇಶನ ಮತ್ತು ನಟನೆ - ಎಲ್ಲವೂ ಅತ್ಯುತ್ತಮವಾಗಿವೆ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅದ್ಭುತವಾಗಿ ನಟಿಸಿದ್ದಾರೆ. ಆದರೆ, ರಾವಣನ ಪಾತ್ರದಲ್ಲಿ ಯಶ್ ಅವರ ಅಭಿನಯವಂತೂ ಅಸಾಧಾರಣ. ನಿಜಕ್ಕೂ ಅದ್ಭುತ.. ಸಂಗೀತವೂ ಎದ್ದು ಕಾಣುವಂತಿತ್ತು; ಎ.ಆರ್. ರೆಹಮಾನ್ ಹಾಡುಗಳು ಮತ್ತು ಹ್ಯಾನ್ಸ್ ಝಿಮ್ಮರ್ ಹಿನ್ನೆಲೆ ಸಂಗೀತ ಅದ್ವಿತೀಯ. ಚಿತ್ರದ ಕಾಲಾವಧಿ ಸ್ವಲ್ಪ ದೀರ್ಘವೆನಿಸಬಹುದು, ಆದರೆ ನನಗೆ ಎಲ್ಲಿಯೂ ಬೇಸರವೆನಿಸಲಿಲ್ಲ. 'ರಾಮಾಯಣ' ನೋಡಲೇಬೇಕಾದ ಚಿತ್ರ. ಭಾರತೀಯ ಸಿನಿಮಾ ಏನು ಸಾಧಿಸಬಲ್ಲದು ಎಂಬುದಕ್ಕೆ ಇದೊಂದು ನೈಜ ಸಾಕ್ಷಿ" ಎಂದು ಬರೆದು 5ಕ್ಕೆ 4.5 ರೇಟಿಂಗ್ ಕೊಟ್ಟಿದ್ದಾನೆ.
ದೇಶ ವಿದೇಶದ ಸಿನಿಮಾಗಳನ್ನು ನೋಡಿ ಗೌತಮ್ ರಿವ್ಯೂ ಮಾಡುತ್ತಾನೆ. ಇತ್ತೀಚೆಗೆ 'ಗಾಡ್ಜಿಲ್ಲಾ ಮೈನಸ್ ಜಿರೊ', ನಾನಿ ನಟನೆಯ 'ದಿ ಪ್ಯಾರಡೈಸ್' ಚಿತ್ರಗಳಿಗೂ ರಿವ್ಯೂ ಪೋಸ್ಟ್ ಮಾಡಿದ್ದ. ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರಕ್ಕೆ ಕೇವಲ 0.5 ರೇಟಿಂಗ್ ಕೊಟ್ಟಿದ್ದು ಬಹಳ ಸುದ್ದಿಯಾಗಿತ್ತು.