ಟಾಲಿವುಡ್ ನಟ ಮಹೇಶ್ ಬಾಬು ಒಳ್ಳೆ 'ಬ್ಯುಸಿನೆಸ್ಮನ್' ಕೂಡ ಹೌದು. ಸಿನಿಮಾ ಬಿಟ್ಟು ಬೇರೆ ಬೇರೆ ಉದ್ಯಮಗಳಲ್ಲಿ ಹಣ ತೊಡಗಿಸಿದ್ದಾರೆ. ಶ್ರೀಮಂತ ಕುಟುಂಬದ ಹಿನ್ನೆಲೆಯ ಮಹೇಶ್ ಬಾಬು ಹಲವು ಹಿಟ್ ಸಿನಿಮಾಗಳ ಮೂಲಕ ಕೋಟಿ ಕೋಟಿ ಸಂಪಾದಿಸಿದ್ದಾರೆ. ಅದನ್ನು ಮತ್ತೆ ಹೂಡಿಕೆ ಮಾಡಿ ಭರ್ಜರಿ ಲಾಭ ಗಳಿಸುತ್ತಿದ್ದಾರೆ.
ತಮ್ಮದೇ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಕ್ಕೂ ಮಹೇಶ್ ಬಾಬು ಮುಂದಾಗಿದ್ದಾರೆ. ಇನ್ನು ಏಷಿಯನ್ ಸಿನಿಮಾಸ್ ಜೊತೆ ಸೇರಿ ತಮ್ಮದೇ ಮಲ್ಟಿಪ್ಲೆಕ್ಸ್ ಚೈನ್ ಆರಂಭಿಸಿದ್ದಾರೆ. ಹೈದರಾಬಾದ್ ಬಳಿಕ ಬೆಂಗಳೂರಿನ ಗಾಂಧಿನಗರದಲ್ಲಿ ಕೂಡ ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಕಾಂಪ್ಲೆಕ್ಸ್ ನಿರ್ಮಿಸಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ಬಳಿ ಸುಬೇದಾರ್ ಛತ್ರಂ ರಸ್ತೆಯಲ್ಲಿರುವ ಕಪಾಲಿ ಚಿತ್ರಮಂದಿರ ಕೆಡವಿ ಅಲ್ಲೇ 'ಎಎಂಬಿ ಕಪಾಲಿ' ಮಲ್ಟಿಪ್ಲೆಕ್ಸ್ ಶುರು ಮಾಡಿದ್ದಾರೆ.
ಇದೀಗ ಬೆಂಗಳೂರಿನ ಉತ್ತರ ಭಾಗದಲ್ಲಿ ಮತ್ತೊಂದು ಮಲ್ಟಿಪ್ಲೆಕ್ಸ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ವರ್ಷ ಆರಂಭದಲ್ಲಿ ಎಎಂಬಿ ಕಪಾಲಿ ಸಿನಿಮಾಸ್ ಉದ್ಘಾಟನೆ ಆಗಿತ್ತು. ಆರಂಭದಲ್ಲಿ ಪ್ರೇಕ್ಷಕರ ಬರ ಎದುರಿಸುವಂತಾಗಿತ್ತು. ಬಳಿಕ 'ಧುರಂಧರ್', 'ರಾಮಾಯಣ' ರೀತಿಯ ದೊಡ್ಡ ದೊಡ್ಡ ಸಿನಿಮಾಗಳು ಬಂದು ಪ್ರೇಕ್ಷಕರನ್ನು ಸೆಳೆದಿದೆ. ಇದೇ ಖುಷಿಯಲ್ಲಿ ಬೆಂಗಳೂರಿನಲ್ಲಿ ಎಎಂಬಿ ಸಾಮ್ರಾಜ್ಯ ವಿಸ್ತರಿಸಲು ಮಹೇಶ್ ಬಾಬು ಮನಸ್ಸು ಮಾಡಿದಂತಿದೆ. ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹತ್ತಿರ ಇರುವಂತೆ ಬೆಂಗಳೂರು ಉತ್ತರ ಭಾಗದಲ್ಲಿ ಎಎಂಬಿ ಮಲ್ಟಿಪ್ಲೆಕ್ಸ್ ತಲೆ ಎತ್ತಬಹುದು ಎಂದು ಅಂದಾಜಿಸಲಾಗ್ತಿದೆ.
ಕೆಲ ವರ್ಷಗಳಿಂದ ಹೈದರಾಬಾದ್ ಗಚ್ಚಿಬೋಲಿಯಲ್ಲಿ ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಕಾರ್ಯ ನಿರ್ವಹಿಸುತ್ತಿದೆ. ಅದರ ಜೊತೆಗೆ ಬೆಂಗಳೂರಿನಲ್ಲಿ ಎಎಂಬಿ ಕಪಾಲಿ ಶುರುವಾಗಿತ್ತು. ಇದೀಗ ಹೈದರಾಬಾದ್ RTC X Roads ವ್ಯಾಪ್ತಿಯಲ್ಲಿ ನಟ ವಿಕ್ಟರಿ ವೆಂಕಟೇಶ್ ಜೊತೆ ಸೇರಿ ಎಎಂಬಿ ವಿಕ್ಟರಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಶೀಘ್ರದಲ್ಲೇ ಉದ್ಘಾಟನೆ ಆಗಲಿದೆ. ಇನ್ನು ಹೈದರಾಬಾದ್ನ ಕೊಂಪಲ್ಲಿ ಹಾಗೂ ಹಕೀಮ್ಪೇಟ್ ಭಾಗದಲ್ಲಿ ಕೂಡ ಎಎಂಬಿ ಹೊಸ ಶಾಖೆಗಳು ಆರಂಭವಾಗಲಿದೆ. ಅದರ ಜೊತೆಗೆ ಬೆಂಗಳೂರು ಉತ್ತರ ಭಾಗದಲ್ಲಿ ಒಂದು ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಲು ಟಾಲಿವುಡ್ ಪ್ರಿನ್ಸ್ ಮುಂದಾಗಿದ್ದಾರೆ. ಅಲ್ಲಿ ಐಮ್ಯಾಕ್ಸ್ ಸ್ಕ್ರೀನ್ ಕೂಡ ಇರಲಿದೆ.
ಮಹೇಶ್ ಬಾಬು ಮಾತ್ರ ಅಲ್ಲು ಅರ್ಜುನ್ ಹೈದರಾಬಾದ್ನಲ್ಲಿ AA ಸಿನಿಮಾಸ್ ಆರಂಭಿಸಿದ್ದಾರೆ. ಚಿರಂಜೀವಿ ಕೂಡ ದೊಡ್ಡ ಮಲ್ಟಿಪ್ಲೆಕ್ಸ್ ಚೈನ್ ನಿರ್ಮಿಸಲು ತಯಾರಿ ನಡೆಸಿದ್ದಾರೆ. ತೆಲುಗು ನಟನೊಬ್ಬ ಬೆಂಗಳೂರಿನಲ್ಲಿ ಇಷ್ಟು ಧೈರ್ಯವಾಗಿ ಮಲ್ಟಿಪ್ಲೆಕ್ಸ್ ಆರಂಭಿಸುವಾಗ ಕನ್ನಡ ಸ್ಟಾರ್ಸ್ ಅಥವಾ ಫಿಲ್ಮ್ ಮೇಕರ್ಸ್ ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಸದ್ಯ ಯಶ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕ್ರೇಜ್ ಸಂಪಾದಿಸಿದ್ದಾರೆ. ನಿರ್ಮಾಪಕರಾಗಿ 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾ ನಿರ್ಮಿಸಿದ್ದಾರೆ. ತಾವೇ ವಿತರಣೆ ಮಾಡಿದ್ದಾರೆ. ಮಾನ್ಸ್ಟರ್ ಮೈಂಡ್ಸ್ ಕ್ರಿಯೇಷನ್ ಹೆಸರಿನಲ್ಲಿ ಯಶ್ ಒಂದು ಮಲ್ಟಿಪ್ಲೆಕ್ಸ್ ಕಾಂಪೆಕ್ಸ್ ಆರಂಭಿಸಬೇಕು ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.