ಮಹೇಶ್ ಬಾಬು ಹಾಗೂ ರಾಜಮೌಳಿ ಜೋಡಿಯ 'ವಾರಣಾಸಿ' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಏಪ್ರಿಲ್ 7ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ ಅದು ಸಾಧ್ಯವಿಲ್ಲ ಎನ್ನಲಾಗ್ತಿದೆ. ಗ್ರಾಫಿಕ್ಸ್ ವರ್ಕ್ ಜಾಸ್ತಿ ಇರುವುದರಿಂದ ಸಿನಿಮಾ ರಿಲೀಸ್ ಮುಂದೂಡುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.
ಜಕ್ಕಣ್ಣ ತಮ್ಮ ಸಿನಿಮಾಗಳ ರಿಲೀಸ್ ಡೇಟ್ ಮುಂದೂಡುವುದು ಹೊಸದೇನು ಅಲ್ಲ. 'ಬಾಹುಬಲಿ' ಸರಣಿ, 'RRR' ಸೇರಿ ಎಲ್ಲಾ ಸಿನಿಮಾಗಳ ಬಿಡುಗಡೆಯನ್ನು ಪದೇ ಪದೆ ಮುಂದೂಡಿದ್ದರು. ಆದರೆ ಕಾದಿದ್ದಕ್ಕೂ ಸಾರ್ಥಕವಾಯ್ತು ಎನ್ನುವಂತೆ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದರು. 1000 ಕೋಟಿ ಬಜೆಟ್ನಲ್ಲಿ 'ವಾರಣಾಸಿ' ಸಿನಿಮಾ ಮಾಡ್ತಿದ್ದಾರೆ ಎನ್ನಲಾಗ್ತಿದೆ. ತೆಲುಗು ಮಾತ್ರವಲ್ಲದೇ ಹಾಲಿವುಡ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮೌಳಿ ಸಿನಿಮಾ ತೆರೆಗೆ ತರುತ್ತಿದ್ದಾರೆ. ಅದಕ್ಕೆ ತಕ್ಕಂತೆ ಮೇಕಿಂಗ್, ಪ್ರಮೋಷನ್ ನಡೀತಿದೆ.
ಓಟಿಟಿಗೆ ಬಂದ ಬಳಿಕ 'RRR' ಸಿನಿಮಾ ಹಾಲಿವುಡ್ ಪ್ರೇಕ್ಷಕರ ಮನಗೆದ್ದಿತ್ತು. ಜೇಮ್ಸ್ ಕ್ಯಾಮರೂನ್ ಸೇರಿ ಹಲವರು ಹಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಸಿನಿಮಾ ಮೆಚ್ಚಿದ್ದರು. ಅವರನ್ನೆಲ್ಲಾ ಮತ್ತೆ ರಂಜಿಸೋಕೆ ಜಕ್ಕಣ್ಣ ಮನಸ್ಸು ಮಾಡಿದ್ದಾರೆ. ಹಾಗಾಗಿ ಇಂಡಿಯಾನ ಜೋನ್ಸ್ ರೀತಿಯ ಆಕ್ಷನ್ ಅಡ್ವೆಂಚರ್ಸ್ ಸಿನಿಮಾ ಮಾಡುತ್ತಿದ್ದಾರೆ. ಮಹೇಶ್ ಬಾಬು ಜೊತೆ ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
'ರಾಮಾಯಣ' ಚಿತ್ರದ ವಿಷ್ಯುವಲ್ಸ್ ನೋಡಿ ರಾಜಮೌಳಿ ಬೆರಗಾಗಿದ್ದಾರೆ. ಅದಕ್ಕಿಂತಲೂ ಅದ್ಭುತವಾಗಿ 'ವಾರಣಾಸಿ' ಸಿನಿಮಾ ತೆರೆಗೆ ತರುವ ಸಾಹಸ ಮಾಡುತ್ತಿದ್ದಾರೆ. ಅದಕ್ಕೆ ಇನ್ನಷ್ಟು ಸಮಯ ಬೇಕು, ಗ್ರಾಫಿಕ್ಸ್ ಕೆಲಸಕ್ಕೆ ಮತ್ತಷ್ಟು ಕಾಲಾವಕಾಶ ಸಿಕ್ಕರೆ ಒಳ್ಳೆ ಔಟ್ಫುಟ್ ನಿರೀಕ್ಷಿಸಬಹುದು ಎನ್ನಲಾಗ್ತಿದೆ. ಸಿನಿಮಾ ರಿಲೀಸ್ ಡೇಟ್ ಬದಲಾವಣೆಗೆ ಮತ್ತೊಂದು ಕಾರಣ ಕೂಡ ಇದೆ ಎನ್ನಲಾಗ್ತಿದೆ.
'ವಾರಣಾಸಿ' ಚಿತ್ರದ ಓಟಿಟಿ ರೈಟ್ಸ್ ನೆಟ್ಫ್ಲಿಕ್ಸ್ ಸಂಸ್ಥೆಗೆ ಮಾರಾಟ ಮಾಡಬೇಕು ಎನ್ನುವುದು ಮೌಳಿ ಲೆಕ್ಕಾಚಾರ. ಕಾರಣ 'RRR' ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗಲಿ ಹಾಲಿವುಡ್ ಮಂದಿ ಮನಗೆದ್ದಿತ್ತು. ಆದರೆ ನೆಟ್ಫ್ಲಿಕ್ಸ್ 'ವಾರಣಾಸಿ' ಚಿತ್ರದ ರೈಟ್ಸ್ ಕೊಂಡುಕೊಳ್ಳಲು ಹಿಂದೇಟು ಹಾಕ್ತಿದೆ. 2026-27 ವರ್ಷದಲ್ಲಿ ಸಿನಿಮಾ ಕೊಂಡುಕೊಳ್ಳಲು ಬಜೆಟ್ ಇಲ್ಲ, 2027-28ರ ವರ್ಷದ ಬಜೆಟ್ನಲ್ಲಿ ಸಿನಿಮಾ ಕೊಂಡುಕೊಳ್ಳುತ್ತೇವೆ ಎನ್ನುತ್ತಿದ್ದಾರಂತೆ. ಅಂದರೆ ಮುಂದಿನ ವರ್ಷ ಜುಲೈ ಬಳಿಕ ಸಿನಿಮಾ ತೆರೆಗೆ ಬರಬೇಕು. ಆ ಬಳಿಕ ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡಲು ಅನುಕೂಲವಾಗುತ್ತದೆ ಎನ್ನುವ ಚರ್ಚೆ ನಡೀತಿದೆಯಂತೆ. ಹಾಗಾಗಿ ಸಿನಿಮಾ ತೆರೆಗೆ ಬರುವುದು ತಡವಾಗಬಹುದು ಎನ್ನಲಾಗ್ತಿದೆ.
ಜುಲೈ 30 ಅಥವಾ ಆಗಸ್ಟ್ 12ರಂದು 'ವಾರಣಾಸಿ' ಸಿನಿಮಾ ಬಿಡುಗಡೆ ಆಗಬಹುದು ಎನ್ನುವ ಚರ್ಚೆ ನಡೀತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಇನ್ನು ನೆಟ್ಫ್ಲಿಕ್ಸ್ ಜೊತೆ ಓಟಿಟಿ ಡೀಲ್ ಬಹುತೇಕ ಮುಕ್ತಾಯವಾಗಿದೆ ಎನ್ನಲಾಗ್ತಿದೆ. ಹಾಗಾಗಿ ಶೀಘ್ರದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.