ರಾಜಮೌಳಿ ಸಾರಥ್ಯದ 'ವಾರಣಾಸಿ' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಮುಂದಿನ ವರ್ಷ ಏಪ್ರಿಲ್ 7ರಂದು ಸಿನಿಮಾ ತೆರೆಗೆ ಬರಬೇಕಿದೆ. ಆದರೆ ಈಗ ಮತ್ತೆ ರಿಲೀಸ್ ಡೇಟ್ ಮುಂದೂಡಿದ್ದಾರೆ ಎನ್ನಲಾಗ್ತಿದೆ. ಜಕ್ಕಣ್ಣ ಸಿನಿಮಾಗಳು ತಡವಾಗುವುದು ಹೊಸದೇನು ಅಲ್ಲ. ಆದರೆ ಈಗ ಕಾರಣ 'ರಾಮಾಯಣ'- 2 ಸಿನಿಮಾ ಎನ್ನಲಾಗ್ತಿದೆ.

ಬಹುಕೋಟಿ ವೆಚ್ಚದಲ್ಲಿ 'ವಾರಣಾಸಿ' ಚಿತ್ರವನ್ನು ಜಕ್ಕಣ್ಣ ತಯಾರಿಸುತ್ತಿದ್ದಾರೆ. ಮಹೇಶ್ ಬಾಬು ಜೊತೆ ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಚಿತ್ರದಲ್ಲಿ ನಟಿಸಿದ್ದಾರೆ. ಪ್ರಕಾಶ್ ರಾಜ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಐಮ್ಯಾಕ್ಸ್ ಸ್ಕ್ರೀನ್‌ಗಳಿಗಾಗಿ ಸಿನಿಮಾ ಕಟ್ಟಿಕೊಡಲಾಗ್ತಿದೆ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಆದರೆ ಗ್ರಾಫಿಕ್ಸ್ ಕೆಲಸಗಳು ಜಾಸ್ತಿ ಇರುವುದರಿಂದ ಸಿನಿಮಾ ರಿಲೀಸ್ ತಡವಾಗಬಹುದು ಎನ್ನಲಾಗ್ತಿದೆ.

ಮುಂದಿನ ವರ್ಷ ದೀಪಾವಳಿಗೆ 'ರಾಮಾಯಣ'- 2 ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಈಗ 2028ರಲ್ಲಿ ಸಿನಿಮಾ ತೆರೆಗೆ ತರುವುದಾಗಿ ಘೋಷಿಸಿದ್ದಾರೆ. ಹಾಗಾಗಿ ಮುಂದಿನ ವರ್ಷ ದೀಪಾವಳಿ ವೀಕೆಂಡ್ ಮೇಲೆ ರಾಜಮೌಳಿ ಕಣ್ಣಿಟ್ಟಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಮುಂದಿನ ವರ್ಷ ಅಕ್ಟೋಬರ್ 28, 29, 30ರಂದು ಬೆಳಕಿನ ಹಬ್ಬದ ಸಡಗರ. ಗುರುವಾರ, ಶುಕ್ರವಾರ ಹಾಗೂ ಶನಿವಾರ ಹಬ್ಬ. 'ವಾರಣಾಸಿ' ರೀತಿಯ ದೊಡ್ಡ ಸಿನಿಮಾ ಬಿಡುಗಡೆಗೆ ಇದಕ್ಕಿಂತ ಒಳ್ಳೆ ಸಮಯ ಬೇಕಾ? ಅಷ್ಟೇ ಅಲ್ಲ 'ರಾಮಾಯಣ-2' ಸಿನಿಮಾ ಮುಂದಕ್ಕೆ ಹೋಗಿರುವುದರಿಂದ ಐಮ್ಯಾಕ್ಸ್ ಸ್ಕ್ರೀನ್‌ಗಳು ಆ ಸಮಯದಲ್ಲಿ ಸಿಗಲಿವೆ.

ನಿರ್ದೇಶಕ ರಾಜಮೌಳಿ ಕನಸಿನ ಸಿನಿಮಾ 'ವಾರಣಾಸಿ'. ಹಾಲಿವುಡ್ ಇಂಡಿಯಾನ ಜೋನ್ಸ್ ರೀತಿಯ ಆಕ್ಷನ್ ಅಡ್ವೆಂಚರಸ್ ಸಿನಿಮಾ. 'ರಾಮಾಯಣ' ಕ್ಕೂ ಲಿಂಕ್ ಮಾಡಿ ಟೈಮ್ ಟ್ರಾವೆಲ್ ಕಥೆಯನ್ನು ಚಿತ್ರದಲ್ಲಿ ಹೇಳಲಾಗ್ತಿದೆ. ಶ್ರೀರಾಮನಾಗಿ ಮಹೇಶ್ ಬಾಬು ಕೆಲ ಸಮಯ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.