ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಹೊಸ ಟ್ರೈಲರ್ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ತಿದೆ. ಈ ಹಿಂದಿನ ಟೀಸರ್ ಹಾಗೂ ಟ್ರೈಲರ್‌ನಲ್ಲಿದ್ದ ತಪ್ಪುಗಳನ್ನು ಸರಿಪಡಿಸಿಕೊಂಡು ಹೊಸ ರೂಪದಲ್ಲಿ ಸಿನಿಮಾ ತೆರೆಗೆ ತರಲು ಯತ್ನಿಸುತ್ತಿರುವುದು ಗೊತ್ತಾಗುತ್ತಿದೆ. ಸದ್ಯ ನಿರ್ದೇಶಕ ರಾಜಮೌಳಿ ಕೂಡ 'ರಾಮಾಯಣ' ಟ್ರೈಲರ್ ನೋಡಿ ಟ್ವೀಟ್ ಮಾಡಿದ್ದಾರೆ.

"ರಾಮಾಯಣವು ಪ್ರತಿಯೊಬ್ಬ ಭಾರತೀಯ ಕಥೆಗಾರನೂ ತಾನು ಹೇಳಬೇಕೆಂದು ಕನಸು ಕಾಣುವಂತಹ ಕಥೆಯಾಗಿದೆ. ನಿತೇಶ್ ಮತ್ತು ನಮಿತ್ ಮಲ್ಹೋತ್ರಾ ಈ ಕಥೆಯನ್ನು ಇಷ್ಟು ಬೃಹತ್ ಮಟ್ಟದಲ್ಲಿ ತೆರೆಗೆ ತರುತ್ತಿರುವುದನ್ನು ನೋಡುವುದು ಸಂತೋಷದ ವಿಷಯ. ಪ್ರತಿಯೊಬ್ಬ ನಟರೂ ಈ ಕಾಲಾತೀತ ಪಾತ್ರಗಳಿಗೆ ಆಳವಾದ ಜೀವ ತುಂಬಿದ್ದಾರೆ. ನವೆಂಬರ್ 5ಕ್ಕಾಗಿ ಕಾಯುತ್ತಿದ್ದೇನೆ. ಇಡೀ ತಂಡಕ್ಕೆ ಶುಭವಾಗಲಿ" ಎಂದು ಜಕ್ಕಣ್ಣ ಬರೆದುಕೊಂಡಿದ್ದಾರೆ.

ಯಶ್ ಆಗಲಿ ಅಥವಾ ರಣ್‌ಬೀರ್ ಕಪೂರ್ ಹೆಸರನ್ನು ಪ್ರಸ್ತಾಪಿಸದೇ ಇಡೀ ತಂಡಕ್ಕೆ ರಾಜಮೌಳಿ ಶುಭ ಕೋರಿದ್ದಾರೆ. ಯಶ್ ಹೆಸರು ತೆಗೆದುಕೊಳ್ಳಲಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ನವೆಂಬರ್ 5ರಂದು 'ರಾಮಾಯಣ' ಸಿನಿಮಾ ತೆರೆಗೆ ಬರಲಿದೆ. ದೇಶ ವಿದೇಶದ ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗಲಿದೆ. ಈಗಾಗಲೇ ಇಂಗ್ಲೀಷ್ ಟ್ರೈಲರ್ ಕೂಡ ಬಿಡುಗಡೆ ಆಗಿ ಸದ್ದು ಮಾಡ್ತಿದೆ.

ಸೋನಿ ಪಿಕ್ಚರ್ಸ್ ಸಂಸ್ಥೆ 'ರಾಮಾಯಣ' ಚಿತ್ರವನ್ನು ವಿಶ್ವದಾದ್ಯಂತ ತೆರೆಗೆ ತರ್ತಿದೆ. ಎರಡು ಭಾಗಗಳಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಮೊದಲ ಭಾಗದಲ್ಲಿ ಸೀತಾಪಹರಣದವರೆಗಿನ ಕಥೆಯನ್ನು ಮಾತ್ರ ಹೇಳಲಾಗ್ತಿದೆ. ಈಗಾಗಲೇ ಚಿತ್ರದ ಪ್ರಚಾರಕ್ಕೆ ಚಾಲನೆ ಕೊಡಲಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಿನಿಮಾ ಸುದ್ದಿಗೋಷ್ಠಿ ನಡೆಸಲಾಯಿತು. ಇಡೀ ಚಿತ್ರತಂಡ ಈ ವೇಳೆ ಹಾಜರಿತ್ತು. ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಕೂಡ ಇಲ್ಲಿಗೆ ಬಂದು ಸಿನಿಮಾ ಬಗ್ಗೆ ಮಾತನಾಡಿದ್ದರು.

'ರಾಮಾಯಣ' ಹೊಸ ಟ್ರೈಲರ್‌ನಲ್ಲಿ ಅದ್ಭುತ ವಿಷ್ಯುವಲ್ಸ್ ನೋಡಬಹುದು. ಮುಂದೆ ರಾಜಮೌಳಿ 'ವಾರಣಾಸಿ' ಸಿನಿಮಾ ಮಾಡ್ತಿದ್ದಾರೆ. ಆ ಚಿತ್ರದಲ್ಲಿ ಕೂಡ ರಾಮಾಯಣದ ಎಪಿಸೋಡ್ ಇದೆ. ಶ್ರೀರಾಮನಾಗಿ ಮಹೇಶ್ ಬಾಬು ದರ್ಶನ ಕೊಡಲಿದ್ದಾರೆ. ಈಗಾಗಲೇ ಕೆಲವರು 'ರಾಮಾಯಣ' ಹಾಗೂ 'ವಾರಣಾಸಿ' ಚಿತ್ರದ ಆ ಎಪಿಸೋಡ್ ನಡುವೆ ಹೋಲಿಕೆ ಮಾಡಲು ಆರಂಭಿಸಿದ್ದಾರೆ. ಯಾರು ಗೆಲ್ತಾರೆ ನೋಡೋಣ ಎಂದು ಕಾಮೆಂಟ್ ಮಾಡ್ತಿದ್ದಾರೆ.