ತೆಲುಗು ನಟ ಮಹೇಶ್ ಬಾಬು ತಮ್ಮ ಯಂಗ್ ಅಂಡ್ ಎನರ್ಜಿಟಿಕ್ ಲುಕ್‌ನಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. ಹಾಲಿವುಡ್ ಹೀರೊ ಎಂದೇ ಅಭಿಮಾನಿಗಳು ಕರೆಯುತ್ತಾರೆ. ಎದೆ ಎತ್ತರದ ಮಕ್ಕಳಿದ್ದರೂ 20ರ ಯುವಕನಂತೆ ಮಹೇಶ್ ಬಾಬು ಛಾರ್ಮ್ ಉಳಿಸಿಕೊಂಡಿದ್ದಾರೆ. ಸದ್ಯ ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದಲ್ಲಿ ಅವರು ನಟಿಸಿದ್ದಾರೆ.

ಸದ್ದಿಲ್ಲದೇ 'ವಾರಣಾಸಿ' ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ ಮಹೇಶ್ ಬಾಬು. ಮುಂದಿನ ವರ್ಷ ಏಪ್ರಿಲ್‌ 7ರಂದು ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಭಿನ್ನ ವಿಭಿನ್ನ ಪಾತ್ರಗಳಲ್ಲಿ ಅವರು ನಟಿಸಿದ್ದಾರೆ. ರುದ್ರ ಎಂಬ ಪಾತ್ರದಲ್ಲಿ ನಟಿಸಿರುವ ಮಹೇಶ್ ಬಾಬು ಕೆಲ ಸಮಯ ಶ್ರೀರಾಮನಾಗಿ ಕೂಡ ದರ್ಶನ ಕೊಡಲಿದ್ದಾರೆ. ಇದೆಲ್ಲದರ ನಡುವೆ ಚಿತ್ರದಲ್ಲಿ 24ರ ಯುವಕನಂತೆ ಕೂಡ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.

ನಟ- ನಟಿಯರನ್ನು ವಯಸ್ಸಾದಂತೆ ಅಥವಾ ಬಹಳ ಯಂಗ್ ಲುಕ್‌ನಲ್ಲಿ ತೆರೆಮೇಲೆ ತೋರಿಸುವ ಪ್ರಯತ್ನ ನಡೆಯುತ್ತಲೇ ಇದೆ. ತಂತ್ರಜ್ಞಾನದ ಸಹಾಯವನ್ನು ಕೂಡ ಅದಕ್ಕಾಗಿ ಬಳಸಿಕೊಳ್ಳಲಾಗ್ತಿದೆ. ವಿಜಯ್ ನಟನೆಯ 'GOAT', ಚಿರಂಜೀವಿ ನಟನೆಯ 'ಆಚಾರ್ಯ' ಹಾಗೂ ರಜನಿಕಾಂತ್ ಅಭಿನಯದ 'ಕೂಲಿ' ಚಿತ್ರದಲ್ಲಿ ಡಿ ಏಜಿಂಗ್ ತಂತ್ರಜ್ಞಾನ ಬಳಸಲಾಗಿತ್ತು. ನಾಯಕ ನಟರನ್ನು ಹಲವು ವರ್ಷ ಚಿಕ್ಕವರಂತೆ ತೋರಿಸಲಾಗಿತ್ತು. ಆದರೆ 'ವಾರಣಾಸಿ' ಚಿತ್ರದಲ್ಲಿ ಯಾವುದೇ ಗ್ರಾಫಿಕ್ಸ್ ಇಲ್ಲದೇ ಮಹೇಶ್ ಬಾಬು ಅವರನ್ನು 25 ವರ್ಷ ಚಿಕ್ಕವರಂತೆ ತೋರಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಮಹೇಶ್ ಬಾಬು ಫಿಟ್‌ನೆಸ್ ನೋಡಿದ್ರೆ ಅವರನ್ನು ಅಷ್ಟು ಯಂಗ್ ಆಗಿ ತೋರಿಸುವುದು ಕಷ್ಟ ಏನಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಚಿತ್ರದ ಪ್ರಮುಖ ಸನ್ನಿವೇಶಗಳಲ್ಲಿ ಹೀಗೆ ಮಹೇಶ್ ಬಾಬು ಸಖತ್ ಯಂಗ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಪ್ರಿಯಾಂಕ ಚೋಪ್ರಾ, ಪೃಥ್ವಿರಾಜ್ ಸುಕುಮಾರ್, ಪ್ರಕಾಶ್ ರಾಜ್ ಸೇರಿ ದೊಡ್ಡ ತಾರಾಗಣ 'ವಾರಣಾಸಿ' ಚಿತ್ರದಲ್ಲಿದೆ.