ನಾಲ್ಕು ವರ್ಷಗಳ ಹಿಂದೆ ತಮಿಳು ನಿರ್ಮಾಪಕ ರವಿಂದರ್ ಹಾಗೂ ಕಿರುತೆರೆ ನಟಿ ಮಹಾಲಕ್ಷ್ಮಿ ಮದುವೆ ಆಗಿದ್ದರು. ಇವರಿಬ್ಬರ ಪ್ರೇಮ ವಿವಾಹ ಸಾಕಷ್ಟು ಟ್ರೋಲ್ ಆಗಿತ್ತು. ಕಾರಣ ನಿರ್ಮಾಪಕ ರವಿಂದರ್ ದೇಹದ ತೂಕ. ಇಷ್ಟು ದಪ್ಪ ಇರುವ ವ್ಯಕ್ತಿಯನ್ನು ಇಷ್ಟು ಕ್ಯೂಟ್ ಆಗಿರುವ ನಟಿ ಯಾಕೆ ಮದುವೆ ಆಗ್ತಾಳೆ. ಆತನ ಹಣಕ್ಕಾಗಿ ಈ ಮದುವೆ ಅಷ್ಟೇ ಎಂದು ವ್ಯಂಗ್ಯವಾಡಿದ್ದರು.

ಬಹಳ ದಿನ ಇವರಿಬ್ಬರ ಮದುವೆ ಜೀವನ ಸಾಗುವುದಿಲ್ಲ. ಆದಷ್ಟು ಬೇಗ ಡಿವೋರ್ಸ್ ಪಡೆದು ದೂರಾಗುತ್ತಾರೆ ಎಂದು ಕಾಮೆಂಟ್ ಮಾಡಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ, ಡಿವೋರ್ಸ್ ಆಗ್ತಾರೆ ಅಂತ ಕೂಡ ವದಂತಿ ಹರಡಿತ್ತು. ಅದಕ್ಕೆಲ್ಲಾ ಜೋಡಿ ಇತಿಶ್ರೀ ಹಾಡಿತ್ತು. ಇದು ರವಿಂದರ್ ಹಾಗೂ ಮಹಾಲಕ್ಷ್ಮಿ ದಂಪತಿ 4ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.

ಮಹಾಲಕ್ಷ್ಮಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ "ಎಲ್ಲವೂ ಪ್ರಾರಂಭವಾಗಿದ್ದು ಇಲ್ಲಿಯೇ, ತಿರುಪತಿಯಲ್ಲಿ… ನಮ್ಮ ಪಯಣ, ನಮ್ಮ ಜೀವನ ಹಾಗೂ ಒಂದು ಸುಂದರವಾದ ಹೊಸ ಆರಂಭವು 4 ವರ್ಷಗಳ ಹಿಂದೆ (ಸೆಪ್ಟೆಂಬರ್ 2022) ಈ ಸ್ಥಳದಿಂದಲೇ ಶುರುವಾಯಿತು" ಎಂದು ಬರೆದುಕೊಂಡಿದ್ದಾರೆ.

"ಪ್ರೀತಿ ಎಂದರೆ ಇತರರು ಏನನ್ನು ನೋಡುತ್ತಾರೆ, ಏನು ಹೇಳುತ್ತಾರೆ ಅಥವಾ ಹೇಗೆ ಟೀಕಿಸುತ್ತಾರೆ ಅನ್ನೋದಲ್ಲ. ಬದಲಾಗಿ, ನಮಗೆ ಏನು ಅನ್ನಿಸುತ್ತದೆ, ನಾವು ಒಬ್ಬರನ್ನೊಬ್ಬರು ಎಷ್ಟು ಕಾಳಜಿ ವಹಿಸುತ್ತೇವೆ ಮತ್ತು ಹೇಗೆ ಪರಸ್ಪರ ಬೆಂಬಲವಾಗಿ ನಿಲ್ತೀವಿ ಅನ್ನೋದು ಮುಖ್ಯ. ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ, ಕಾಳಜಿ ವಹಿಸುತ್ತೇವೆ ಹಾಗೂ ಜೊತೆಯಾಗಿ ನಿಲ್ತೀವಿ" ಎಂದು ನಟಿ ಮಹಾಲಕ್ಷ್ಮಿ ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ಸಖತ್ ವೈರಲ್ ಆಗ್ತಿದೆ.