ಖ್ಯಾತ ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ತೆಳ್ಳಗಾಗಿದ್ದಾರೆ. ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಿಗೂ ಅವರು ಟ್ಯೂನ್ ಹಾಕಿದ್ದಾರೆ. 'RRR' ಚಿತ್ರದ 'ನಾಟು ನಾಟು' ಹಾಡಿಗೆ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಕೀರವಾಣಿ ಹೊಸ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ.

ದಡೂತಿ ದೇಹದ ಎಂ. ಎಂ ಕೀರವಾಣಿ ಬರೋಬ್ಬರಿ 22 ಕೆಜಿ ತೂಕ ಇಳಿಸಿದ್ದಾರೆ. ಈ ಬಗ್ಗೆ ಬಾಲಿವುಡ್ ನಟ ಅನುಪಮ್ ಖೇರ್ ಮಾಹಿತಿ ನೀಡಿದ್ದಾರೆ. ಹೊಸ ರೂಪದಲ್ಲಿ ಕೀರವಾಣಿ ನೋಡಿ ಅಚ್ಚರಿ ಆಯಿತು ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಕೀರವಾಣಿ.. Before and After.. ನನ್ನ ಆತ್ಮೀಯ ಸ್ನೇಹಿತ, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂ. ಎಂ. ಕೀರವಾಣಿ ಅವರು ಬರೋಬ್ಬರಿ 22 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ.. ಅವರ ಈ ದೃಢನಿಶ್ಚಯ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ" ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಹೈದರಾಬಾದ್ ಪ್ರವಾಸದ ವೇಳೆ ಕೀರವಾಣಿ ಅವರನ್ನು ಅನುಪಮ್ ಖೇರ್ ಭೇಟಿ ಮಾಡಿದ್ದಾರೆ. "ಕೀರಚಾಣಿ ಬಹಳ ಲವಲವಿಕೆಯಿಂದ, ಅಪಾರ ಶಕ್ತಿಯಿಂದ ಕೂಡಿದ್ದು, ಹೊಸ ಹುರುಪಿನೊಂದಿಗೆ ಜಗತ್ತನ್ನೇ ಗೆಲ್ಲಲು ಸಿದ್ಧರಾಗಿದ್ದರು. ಅವರ ನಡಿಗೆಯಲ್ಲಿ ಒಂದು ರೀತಿಯ ಉತ್ಸಾಹವಿತ್ತು. ಅವರನ್ನು ಇಷ್ಟು ಸಂತೋಷವಾಗಿ ಆತ್ಮವಿಶ್ವಾಸದಿಂದ ನೋಡುವುದು ನನಗೆ ಹೆಮ್ಮೆ ತಂದಿತು. ಕೀರವಾಣಿ ನೀವು ಸಂಗೀತದ ಮೇಧಾವಿ. ಏಕಾಗ್ರತೆ ಮತ್ತು ದೃಢನಿಶ್ಚಯವಿದ್ದರೆ ಏನನ್ನು ಸಾಧಿಸಬಹುದು ಎಂಬುದನ್ನು ನೀವು ನಮಗೆ ತೋರಿಸಿಕೊಟ್ಟಿದ್ದೀರಿ" ಎಂದು ಅನುಪಮ್ ಖೇರ್ ವಿವರಿಸಿದ್ದಾರೆ.

ನಿರ್ದೇಶಕ ಎಸ್. ಎಸ್ ರಾಜಮೌಳಿ ಸೋದರ ಸಂಬಂಧಿ ಎಂ. ಎಂ ಕೀರವಾಣಿ. ಜಕ್ಕಣ್ಣ ನಿರ್ದೇಶನದ ಎಲ್ಲಾ ಚಿತ್ರಗಳಿಗೂ ಸಂಗೀತ ಸಂಯೋಜನೆ ಮಾಡಿ ಗೆದ್ದಿದ್ದಾರೆ. ಇದೀಗ 'ವಾರಣಾಸಿ' ಚಿತ್ರಕ್ಕೆ ಜೋಡಿ ಜೊತೆಯಾಗಿದೆ. ಮಹೇಶ್ ಬಾಬು, ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಿಯಾಂಕ ಚೋಪ್ರಾ ಚಿತ್ರದಲ್ಲಿ ನಟಿಸ್ತಿದ್ದಾರೆ. ಬಹಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

ಕನ್ನಡದಲ್ಲಿ 'ಅಳಿಮಯ್ಯ', 'ಸ್ವಾತಿ', 'ಅಪ್ಪಾಜಿ', 'ಕರ್ನಾಟಕ ಸುಪುತ್ರ' ಕೆಲ ಚಿತ್ರಗಳಿಗೆ ಎಂ. ಎಂ ಕೀರವಾಣಿ ಟ್ಯೂನ್ ಹಾಕಿದ್ದರು. ಕೆಲ ಕನ್ನಡ ಹಾಡುಗಳಿಗೂ ದನಿಯಾಗಿದ್ದಾರೆ.