ಸಂಗೀತ ನಿರ್ದೇಶಕ ಅನಿರುದ್ದ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡ ಮಾಲಕಿ ಕಾವ್ಯಾ ಮಾರನ್ ಮದುವೆ ಸಂಭ್ರಮ ಮುಂದುವರೆದಿದೆ. ಗ್ರೀಸ್‌ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಬಳಿಕ ಚೆನ್ನೈನಲ್ಲಿ ಎರಡು ದಿನ ರಿಸೆಪ್ಷನ್ ಪಾರ್ಟಿ ನಡೀತು. ಇದೀಗ ಸನ್ ನೆಟ್‌ವರ್ಕ್ ಸಂಸ್ಥೆ ಸಿಬ್ಬಂದಿಗೆ ನವದಂಪತಿ ಮದುವೆ ಊಟ ಹಾಕಿಸಿದ್ದಾರೆ.
ಇತ್ತೀಚೆಗೆ ತಮ್ಮ ಸಂಸ್ಥೆಯ ಸಿಬ್ಬಂದಿಗೆ ಅನಿರುದ್ದ್ - ಕಾವ್ಯಾ ಮದುವೆ ಉಡುಗೊರೆ ದೊರೆತಿತ್ತು. ಸ್ವೀಟ್ ಬಾಕ್ಸ್ ಜೊತೆಗೆ ಚಿನ್ನದ ಉಂಗುರ ಕೊಟ್ಟಿದ್ದಾರೆ ಎಂದು ಸುದ್ದಿ ಆಗಿತ್ತು. ಇದೀಗ ತಮ್ಮ ಕಚೇರಿಯಲ್ಲೇ ಎಲ್ಲಾ ಸಿಬ್ಬಂದಿಗೆ ಭೂರಿ ಭೋಜನ ವ್ಯವಸ್ಥೆ ಮಾಡಿಸಿದ್ದರು. ಖುದ್ದಾಗ ಜೋಡಿ ಭೇಟಿ ನೀಡಿ ಊಟೋಪಚಾರ ವಿಚಾರಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗ್ತಿದೆ.
ಸನ್ ನೆಟ್‌ವರ್ಕ್ ಒಡೆಯ ಕಲಾನಿಧಿ ಮಾರನ್ ಮಗಳು ಕಾವ್ಯಾ ಮಾರನ್. ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿಯ ಒಡತಿ. ಸನ್ ನೆಟ್‌ವರ್ಕ್ ಅಡಿಯಲ್ಲಿ ಸಾಕಷ್ಟು ಮನರಂಜನೆ ವಾಹಿನಿಗಳು ಕಾರ್ಯ ನಿರ್ವಹಿಸುತ್ತಿವೆ. ಕನ್ನಡದ ಉದಯ ಟಿವಿ ಕೂಡ ಇದೇ ಸಂಸ್ಥೆಯ ಅಂಗ ಸಂಸ್ಥೆ. ತಮ್ಮ ಮಗಳ ಮದುವೆಗೆ ತಮ್ಮ ಸಿಬ್ಬಂದಿಗೆಲ್ಲಾ ಕಲಾನಿಧಿ ಮಾರನ್ ಊಟ ಹಾಕಿಸಿದ್ದಾರೆ. ವೆಜ್ ಹಾಗೂ ನಾನ್‌ವೆಜ್‌ನಲ್ಲಿ ತರಹೇವಾರಿ ಭಕ್ಷ್ಯಭೋಜನ ವ್ಯವಸ್ಥೆ ಮಾಡಲಾಗಿತ್ತು.
ಅನಿರುದ್ದ್ ಹಾಗೂ ಕಾವ್ಯಾ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದಾರೆ. ಬಹಳ ದಿನಗಳ ಹಿಂದೆ ಇಬ್ಬರ ಮದುವೆ ಬಗ್ಗೆ ಗುಲ್ಲಾಗಿತ್ತು. ಆರಂಭದಲ್ಲಿ ಇದೆಲ್ಲಾ ವದಂತಿ ಎಂದೇ ಎಲ್ಲರೂ ಭಾವಿಸಿದ್ದರು. ಇನ್ನು ರಜನಿಕಾಂತ್ ಕುಟುಂಬದ ಸಂಬಂಧಿ ಅನಿರುದ್ದ್ ರವಿಚಂದರ್. ಸ್ವತಃ ಸೂಪರ್ ಸ್ಟಾರ್ ಮುಂದೆ ನಿಂತು ಈ ಮದುವೆ ಮಾತುಕತೆ ನಡೆಸಿದ್ದರು ಎಂದು ಸುದ್ದಿ ಆಗಿತ್ತು. ನವೆಂಬರ್ 11ರಂದು ದೂರದ ಗ್ರೀಸ್ ದೇಶದ ರೆಸಾರ್ಟ್‌ವೊಂದರಲ್ಲಿ ಅನಿ-ಕಾವ್ಯಾ ಮದುವೆ ನಡೆದಿತ್ತು.
ಸಂಪ್ರದಾಯಬದ್ಧವಾಗಿ ಅಲ್ಲದೇ ಆತ್ಮಗೌರವ ಪದ್ಧತಿಯಂತೆ ಜೋಡಿ ಮದುವೆ ಆಗಿತ್ತು. ನವೆಂಬರ್ 21ರಂದು ಚೆನ್ನೈನ ಸ್ಟಾರ್ ಹೋಟೆಲ್‌ನಲ್ಲಿ ರಿಸೆಪ್ಷನ್ ಪಾರ್ಟಿ ಆಯೋಜಿಸಲಾಗಿತ್ತು. ತಮಿಳುನಾಡು ಸಿಎಂ ವಿಜಯ್, ಮಾಜಿ ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಸಾಕಷ್ಟು ಗಣ್ಯರು ಭಾಇ ಆಗಿ ನವಜೋಡಿಗೆ ಶುಭ ಕೋರಿದ್ದರು. ಮರುದಿನ ಸಂಜೆ ಮತ್ತೊಂದು ರಿಸೆಪ್ಷನ್ ಪಾರ್ಟಿ ಹಮ್ಮಿಕೊಳ್ಳಲಾಗಿತ್ತು. ಮಾಜಿ ಕ್ರಿಕೆಟಿಗ ಎಂ. ಎಸ್ ಧೋನಿ, ನಟ ವಿಜಯ್ ದೇವರಕೊಡ ಹಾಗೂ ರಶ್ಮಿಕಾ ದಂಪತಿ ಸೇರಿದಂತೆ ಸಾಕಷ್ಟು ತಾರೆಯರು ಈ ಸಂಭ್ರಮಕ್ಕೆ ಸಾಕ್ಷಿ ಆಗಿದ್ದರು.
Kavya Maran & Anirudh hosted a special lunch for Sun TV employees as a lovely gesture of appreciation and togetherness! ❤️✨👏 pic.twitter.com/cekrS7Rzwg
— 𝑩𝒖𝒕𝒕𝒆𝒓𝒇𝒍𝒚🦋 (@buttu_iam27) November 25, 2026