ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ಮದುವೆ ಗ್ರೀಸ್‌ನಲ್ಲಿ ನಡೆದಿತ್ತು. ಸಂಪ್ರದಾಯಬದ್ಧವಾಗಿ ಮದುವೆಯಾಗದೇ ಆತ್ಮಗೌರವ ಪದ್ಧತಿಯಂತೆ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದ್ದರು. ರಜನಿಕಾಂತ್ ಸೇರಿ ಕೆಲವೇ ಆಪ್ತರು ಮದುವೆ ಸಮಾರಂಭಕ್ಕೆ ಸಾಕ್ಷಿ ಆಗಿದ್ದರು. ಇದೀಗ ಚೆನ್ನೈನಲ್ಲಿ ರಿಸೆಪ್ಷನ್ ಪಾರ್ಟಿಗೆ ವೇದಿಕೆ ಸಿದ್ಧವಾಗಿದೆ. ಇದರ ನಡುವೆ ತಮ್ಮ ಸಿಬ್ಬಂದಿಗೆ ಸನ್ ನೆಟ್‌ವರ್ಕ್ ಉಡುಗೊರೆ ನೀಡಿದೆ.

ಖ್ಯಾತ ಉದ್ಯಮಿ ಕಲಾನಿಧಿ ಮಾರನ್ ಪುತ್ರಿ ಕಾವ್ಯಾ ಮಾರನ್. ಸನ್ ನೆಟ್‌ವರ್ಕ್ ಸೇರಿ ಹಲವು ಉದ್ಯಮಗಳಲ್ಲಿ ಅವರ ಕುಟುಂಬ​​ ತೊಡಗಿಸಿಕೊಂಡಿದೆ. ಇನ್ನು ಸನ್​​ ರೈಸರ್ಸ್​​ ಹೈದರಾಬಾದ್ ಐಪಿಎಲ್ ತಂಡದ ಮಾಲಕಿ ಕಾವ್ಯಾ ಮಾರನ್. ಬಹಳ ಅದ್ಧೂರಿಯಾಗಿ ಅನಿ-ಕಾವ್ಯಾ ಮದುವೆ ನಡೆದಿದೆ. ಚೆನ್ನೈನಲ್ಲಿ ನಡೆಯುತ್ತಿರುವ ರಿಸೆಪ್ಷನ್ ಪಾರ್ಟಿಗೆ ವಿವಿಧ ಕ್ಷೇತ್ರಗಳ ಗಣ್ಯರು, ಸಿನಿಮಾ ತಾರೆಯರು ಹಾಜರಾಗುತ್ತಿದ್ದಾರೆ. ಸನ್ ನೆಟ್‌ವರ್ಕ್ ಸಿಬ್ಬಂದಿಗೂ ಆಹ್ವಾನ ನೀಡಲಾಗಿದೆ.

ರಿಸೆಪ್ಷನ್ ಪಾರ್ಟಿಗೆ ಆಮಂತ್ರಣ ಪತ್ರದ ಜೊತೆಗೆ ಚಿನ್ನದ ಉಡುಗೊರೆಯನ್ನು ಸಂಸ್ಥೆ ತಮ್ಮ ಸಿಬ್ಬಂದಿಗೆ ತಲುಪಿಸಿದೆ. ಸಿಬ್ಬಂದಿ ಈ ಬಗ್ಗೆ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸನ್ ಪಿಕ್ಚರ್ಸ್ ಸಂಸ್ಥೆಯ ಸಿನಿಮಾಗಳು ಗೆದ್ದಾಗ ಕೂಡ ಕೆಲಸ ಮಾಡಿದವರಿಗೆ ಚಿನ್ನದ ನಾಣ್ಯದ ಉಡುಗೊರೆ ನೀಡಿದ್ದನ್ನು ನೋಡಿದ್ದೇವೆ. ಇದೀಗ ಚಿನ್ನದ ಉಂಗುರ ಜೊತೆಗೆ ಸ್ವೀಟ್ ಬಾಕ್ಸ್ ಅನ್ನು ತಮ್ಮ ಸಿಬ್ಬಂದಿಗೆ ಸಂಸ್ಥೆ ನೀಡಿದೆ. ಆಯಾ ಸಂಸ್ಥೆ ಕಚೇರಿಯಲ್ಲಿ ಮದುವೆ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ. ಇದಕ್ಕೆ ಸಿಬ್ಬಂದಿ ಸಂತಸ ವ್ಯಕ್ತಪಡಿಸಿ ವೀಡಿಯೋ ಪೋಸ್ಟ್ ಮಾಡುತ್ತಿದ್ದಾರೆ.

ಸಂಗೀತ ನಿರ್ದೇಶಕರಾಗಿ ಅನಿರುದ್ದ್ ರವಿಚಂದರ್ ಜನಪ್ರಿಯರಾಗಿದ್ದಾರೆ. ರಜನಿಕಾಂತ್ ಕುಟುಂಬಕ್ಕೆ ಅವರು ಸಂಬಂಧಿ ಆಗಬೇಕು. ಕೆಲ ದಿನಗಳ ಹಿಂದೆ ಕಾವ್ಯಾ ಮಾರನ್ ತಂದೆ ತಾಯಿ ದೇಶದ ಗಣ್ಯರನ್ನು ಭೇಟಿ ಮಾಡಿ ಮಗಳ ರಿಸೆಪ್ಷನ್ ಪಾರ್ಟಿಗೆ ಆಮಂತ್ರಣ ನೀಡಿದ್ದರು. ಪ್ರಧಾನಿ ಮೋದಿ, ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಸೇರಿ ಸಾಕಷ್ಟು ಗಣ್ಯರನ್ನು ಆಹ್ವಾನಿಸಿದ್ದರು.