ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಲವ್ & ವಾರ್' ಸಿನಿಮಾ ರಿಲೀಸ್ ಡೇಟ್ ಘೋಷಣೆಯಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಈಗಾಗಲೇ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕೊಂಚ ತಡವಾಗಿ ರಣ್‌ಬೀರ್ ಕಪೂರ್ ನಟನೆಯ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ.
ರಣ್‌ಬೀರ್ ಕಪೂರ್ ಜೊತೆ ಪತ್ನಿ ಆಲಿಯಾ ಭಟ್ ಕೂಡ 'ಲವ್ & ವಾರ್' ಚಿತ್ರದಲ್ಲಿ ನಟಿಸಿದ್ದಾರೆ. ವಿಕ್ಕಿ ಕೌಶಲ್ ಸಹ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಜನವರಿ 21ರಂದು ಸಿನಿಮಾ ತೆರೆಗೆ ತರುವುದಾಗಿ ಚಿತ್ರತಂಡ ಹೇಳಿದೆ. ರಣ್‌ಬೀರ್ ಕಪೂರ್ ಕಾರ್‌ನಲ್ಲಿ ಕೂಡ ಪೋಸ್ಟರ್ ಬಿಟ್ಟಿದ್ದಾರೆ. ಎಡಗೈ ಗಾಯಗೊಂಡು ರಕ್ತ ಸೋರುತ್ತಿದ್ದು ಬಲಗೈಲಿ ಡ್ರೈವ್ ಮಾಡುತ್ತಿರುವಂತೆ ತೋರಿಸಿದ್ದಾರೆ. ಕ್ಲೀನ್ ಶೇವ್‌ನಲ್ಲಿ ಮೀಸೆ ಬಿಟ್ಟು ಸನ್‌ಗ್ಲಾಸ್ ಧರಿಸಿ ರಣ್‌ಬೀರ್ ದರ್ಶನ ಕೊಟ್ಟಿದ್ದಾರೆ.
ಜಿಯೋ ಸ್ಟುಡಿಯೋಸ್ ಜೊತೆ ಸೇರಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಮ್ಮದೇ ಬ್ಯಾನರ್ ಅಡಿಯಲ್ಲಿ 'ಲವ್ & ವಾರ್' ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ ರಣ್‌ಬೀರ್ ನಟನೆಯ 'ರಾಮಾಯಣ' ಚಿತ್ರದ ಮೊದಲ ಭಾಗ ತೆರೆ ಬರಲಿದೆ. ಎರಡು ತಿಂಗಳ ಅಂತರದಲ್ಲಿ 'ಲವ್ & ವಾರ್' ಸಿನಿಮಾ ತೆರೆಗಪ್ಪಳಿಸಲಿದೆ. ಮುಂದಿನ ವರ್ಷ ದೀಪಾವಳಿಗೆ 'ರಾಮಾಯಣ' ಚಿತ್ರದ ಎರಡನೇ ಭಾಗ ಕೂಡ ಬಿಡುಗಡೆಯಾಗಲಿದೆ. ಹೀಗೆ ಒಂದರ ಹಿಂದೆ ಒಂದು ರಣ್‌ಬೀರ್ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.