ಒಂದು ಭಾಷೆಯಲ್ಲಿ ಪ್ರೇಕ್ಷಕರಿಂದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದ್ದಂತೆ ಬೇರೆ ಭಾಷೆಗಳಿಗೆ ಡಬ್ ಮಾಡುವುದು ಹೆಚ್ಚಾಗ್ತಿದೆ. 'ಕಾಂತಾರ', 'ಸು ಫ್ರಂ ಸೋ' ಸೇರಿದಂತೆ ಕೆಲ ಸಿನಿಮಾಗಳು ಇದೇ ರೀತಿ ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗಿದ್ದವು. ಅದ್ಭುತ ರೆಸ್ಪಾನ್ಸ್ ಸಿಗುತ್ತಿದ್ದಂತೆ ಬೇರೆ ಭಾಷೆಗಳಿಗೆ ಡಬ್ ಮಾಡಲಾಗಿತ್ತು. ಅಲ್ಲಿ ಕೂಡ ಹಿಟ್ ಆಗಿತ್ತು. ಸದ್ಯ 'ಪ್ರೇಮದ ಊರಲಿ' ಸಿನಿಮಾ ಅದೇ ಹಾದಿಯಲ್ಲಿದೆ.

ಕನ್ನಡ ಬಳಿಕ ತೆಲುಗಿಗೆ ಸಿನಿಮಾ ಡಬ್ ಆಗಿ ನಾಳೆ(ಅಕ್ಟೋಬರ್ 2) ಬಿಡುಗಡೆ ಮಾಡಲಾಗ್ತಿದೆ. ಸಿನಿಮಾಗೆ ಯಾವುದೇ ಭಾಷೆಯ ಗಡಿ ಇಲ್ಲ. ಒಳ್ಳೆ ಸಿನಿಮಾ ಎಲ್ಲಾ ಪ್ರೇಕ್ಷಕರನ್ನು ರಂಜಿಸಿ ಗೆಲ್ಲುತ್ತದೆ. ಡಬ್ ಮಾಡುವ ಸಾಧ್ಯತೆ ಇರುವುದರಿಂದ ಪ್ರೇಕ್ಷಕರು ತಮ್ಮದೇ ಭಾಷೆಯಲ್ಲಿ ಸಿನಿಮಾ ನೋಡುವ ಅವಕಾಶ ಸಿಗುತ್ತಿದೆ. ದಿನದಿಂದ ದಿನಕ್ಕೆ 'ಪ್ರೇಮದ ಊರಲಿ' ಸಿನಿಮಾ ಕಲೆಕ್ಷನ್ ಹೆಚ್ಚಾಗ್ತಿದೆ. ಮೊದಲ ದಿನಕ್ಕಿಂತ 6ನೇ ದಿನ ಗಳಿಕೆ ಚೆನ್ನಾಗಿದೆ. ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಅದು ಚಿತ್ರಕ್ಕೆ ವರವಾಗಿ ಪರಿಣಮಿಸಿದೆ.

ಮನೋಜ್ ಕುಮಾರ್ ನಿರ್ದೇಶನದ ಹಳ್ಳಿ ಸೊಗಡಿನ ಚಿತ್ರದಲ್ಲಿ ಶ್ರೀ ರಾಮ್, ರಂಗಾಯಣ ರಘು, ತಪಸ್ವಿನಿ ಪೂಣಚ್ಚ ಹಾಗೂ ರಾಮಿಕಾ ಶಿವು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸುನಾದ್ ಗೌತಮ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿದೆ. ಸಂಬಂಧಗಳ ಮೌಲ್ಯ ಸಾರುವ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಕನ್ನಡ ಸಿನಿಮಾ ತಾರೆಯರು 'ಪ್ರೇಮದ ಊರಲಿ' ಸಿನಿಮಾ ನೋಡಿ ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ತೆಲುಗಿನಲ್ಲಿ ಡಬ್ ಆಗಿ ಬಿಡುಗಡೆ ಆಗುತ್ತಿರುವ ಚಿತ್ರಕ್ಕೆ ನಟ ಸಾಯಿಕುಮಾರ್ ಶುಭ ಕೋರಿದ್ದಾರೆ.

ಸಿನಿಮಾ ಕಲೆಕ್ಷನ್

ಚಿತ್ರದ ಬಾಕ್ಸಾಫೀಸ್ ವಿಚಾರಕ್ಕೆ ಬಂದರೆ ಮೊದಲ ದಿನ 13 ಲಕ್ಷ ರೂ. ಗಳಿಕೆ ಸಾಧಾರಣ ಓಪನಿಂಗ್ ಪಡೆದುಕೊಂಡಿತ್ತು. ನಿಧಾನವಾಗಿ ಸಿನಿಮಾ ನೋಡಿದವರೆಲ್ಲಾ ಚೆನ್ನಾಗಿದೆ ಎನ್ನುತ್ತಿದ್ದಂತೆ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದರು. ಚಿತ್ರಮಂದಿರಗಳಲ್ಲಿ ಶೋಗಳ ಸಂಖ್ಯೆ ಹೆಚ್ಚುತ್ತಾ ಹೋಯ್ತು. ಆರನೇ ದಿನ ಸಿನಿಮಾ 1.74 ಕೋಟಿ ರೂ. ಕಲೆಕ್ಷನ್ ಮಾಡಿ ಹುಬ್ಬೇರಿಸಿದೆ. ಇನ್ನು ಒಂದು ವಾರ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುವುದರಲ್ಲಿ ಅನುಮಾನವಿಲ್ಲ. ಒಟ್ಟಾರೆ ಸಿನಿಮಾ 5.37 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ.