ನಿಜಕ್ಕೂ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಟೈಮೇ ಸರಿ ಇಲ್ಲ ಅನ್ಸತ್ತೆ. ನಿರ್ಮಿಸಿದ ಯಾವುದೇ ಸಿನಿಮಾ ಕೈ ಹಿಡೀತಿಲ್ಲ. 'ಜನನಾಯಗನ್' ಹಾಗೂ 'ಟಾಕ್ಸಿಕ್' ಸಿನಿಮಾಗಳ ಮೇಲೆ ಭಾರೀ ನಿರೀಕ್ಷೆ ಇತ್ತು. ಆದರೆ ಕಾರಣಾಂತರಗಳಿಂದ ಎರಡೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಎಷ್ಟೇ ಸೋಲು ಎದುರಾದರೂ ಹೊಸ ಹೊಸ ಸಿನಿಮಾಗಳನ್ನು ಸಂಸ್ಥೆ ನಿರ್ಮಿಸುತ್ತಿದೆ. ಇದೀಗ ವೆಂಕಟ್ ಕೊನಂಕಿ ನಿರ್ಮಾಣದ ಮತ್ತೊಂದು ಭಾರೀ ಬಜೆಟ್ ಸಿನಿಮಾ ಸೋಲಿನ ಹಾದಿ ಹಿಡಿದಿದೆ.
ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸಿನಿಮಾಗಳನ್ನು ನಿರ್ಮಾಣ ಮಾಡ್ತಿದೆ. 'ಹೈವಾನ್' ಸಿನಿಮಾ ಮೂಲಕ ಬಾಲಿವುಡ್ ಅಂಗಳ ಪ್ರವೇಶಿಸಿದೆ. ಈ ವಾರ ತೆರೆಗೆ ಬಂದಿರುವ ಈ ಕ್ರೈಂ ಥ್ರಿಲ್ಲರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಡಲ್ಲಾಗಿದೆ. ಕೆಲವರು ಚೆನ್ನಾಗಿದೆ ಎನ್ನುತ್ತಿದ್ದರೂ ಬುಕ್ಕಿಂಗ್ ಮಾತ್ರ ನೀರಸವಾಗಿದೆ. ವೀಕೆಂಡ್ ಮ್ಯಾಜಿಕ್ ಮಾಡದೇ ಇದ್ದರೆ ಸಿನಿಮಾ ಸೋಲುವುದು ಬಹುತೇಕ ಖಚಿತ ಎನ್ನುವಂತಾಗಿದೆ.
ಅಕ್ಷಯ್ ಕುಮಾರ್ ಹಾಗೂ ಸೈಫ್ ಅಲಿಖಾನ್ ರೀತಿಯ ಸ್ಟಾರ್ ನಟರು 'ಹೈವಾನ್' ಚಿತ್ರದಲ್ಲಿ ನಟಿಸಿದ್ದಾರೆ. ಪ್ರಿಯದರ್ಶನ್ ಆಕ್ಷನ್ ಕಟ್ ಹೇಳಿದ್ದಾರೆ. ಶೈಲಜಾ ದೇಸಾಯಿ ಫೆನ್ ಸಂಸ್ಥೆ ಜೊತೆ ಸೇರಿ ಕೆವಿಎನ್ ಸಂಸ್ಥೆ ಸಿನಿಮಾ ತಯಾರಿಸಿದೆ. ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ರೂಪುಗೊಂಡಿದೆ. ಆದರೆ ಮೊದಲ ದಿನ ಕಲೆಕ್ಷನ್ 5 ಕೋಟಿ ರೂ. ಕೂಡ ದಾಟಿಲ್ಲ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಸದ್ಯ ಬುಕ್‌ಮೈ ಶೋನಲ್ಲಿ ಗಂಟೆಗೆ 1500 ಟಿಕೆಟ್ ಮಾತ್ರ ಬುಕ್ ಆಗ್ತಿದೆ.
ಮಲಯಾಳಂನಲ್ಲಿ ಬಂದಿದ್ದ 'ಒಪ್ಪಂ' ಸಿನಿಮಾ ರೀಮೆಕ್ ಇದು. ಪ್ರೀತಂ ಸಂಗೀತ ಚಿತ್ರಕ್ಕಿದೆ. ವಿಮರ್ಶಕರು ಕೂಡ 'ಹೈವಾನ್' ಚಿತ್ರವನ್ನು ಟೀಕಿಸಿದ್ದಾರೆ. ನಿಧಾನವಾಗಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಾ ಕಾದು ನೋಡಬೇಕಿದೆ. ಹೀಗೆ ದೊಡ್ಡ ದೊಡ್ಡ ಸಿನಿಮಾಗಳೇ ಸೋತ್ರು ಕೆವಿಎನ್ ಸಂಸ್ಥೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೊಸ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುತ್ತಲೇ ಇದೆ. ಸಾಕಷ್ಟು ಸಿನಿಮಾಗಳನ್ನು ವಿತರಣೆ ಮಾಡುತ್ತಿದೆ. ಇಷ್ಟು ಸಿನಿಮಾಗಳು ಸೋತ್ರು ಸಂಸ್ಥೆಯ ಧೈರ್ಯಕ್ಕೆ ಕೆಲವರು ಬಹುಪರಾಕ್ ಎನ್ನುತ್ತಿದ್ದಾರೆ.
ಕನ್ನಡದಲ್ಲಿ ಶಿವರಾಜ್‌ಕುಮಾರ್ ನಟನೆಯ ಬೇಲ್, ಶ್ರೀನಿ ನಿರ್ದೇಶನದ 'ಬೀರ್‌ಬಲ್-2' ಚಿತ್ರಗಳನ್ನು ಕೆವಿಎನ್ ಸಂಸ್ಥೆ ತೆರೆಗೆ ತರಲು ಸಜ್ಜಾಗಿದೆ. ತೆಲುಗಿನಲ್ಲಿ ಚಿರಂಜೀವಿ ನಟನೆಯ 'ಕಾಕ' ಚಿತ್ರಕ್ಕೆ ಹಣ ಹೂಡಿದೆ. ಹೀಗೆ ಸಂಸ್ಥೆ ಸಾಲು ಸಾಲು ಸಿನಿಮಾಗಳನ್ನು ನಿರ್ಮಾಣ ಮಾಡ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಬಳಿಕ ಬಾಲಿವುಡ್ ಸಿನಿಮಾ ನಿರ್ಮಿಸಿತ್ತು ಸಂಸ್ಥೆ. ಮೊದಲ ಪ್ರಯತ್ನದಲ್ಲೇ ಅಲ್ಲಿ ಹಿನ್ನಡೆಯಾಗಿದೆ.