ಅದ್ಯಾಕೋ ಧ್ರುವ ಸರ್ಜಾ ನಸೀಬು ಚೆನ್ನಾಗಿ ಇಲ್ಲ. ಮೊದಲ ಮೂರು ಸಿನಿಮಾಗಳು ಹಿಟ್ ಆಗಿದ್ದವು. ಬಳಿಕ ಯಾವುದೇ ಸಿನಿಮಾ ಕೈ ಹಿಡಿಯುತ್ತಿಲ್ಲ. ಇನ್ನು ಅವರ ಪ್ರತಿ ಸಿನಿಮಾ ಪದೇ ಪದೆ ತಡವಾಗುತ್ತದೆ. ಪ್ರೇಮ್ ಜೊತೆ ಮಾಡಿದ 'KD' ಸಿನಿಮಾ ಕೂಡ ಕೈ ಹಿಡಿಯಲಿಲ್ಲ. 'ಕ್ರಿಮಿನಲ್' ಸಿನಿಮಾ ನಿಂತಿದೆ. ದುನಿಯಾ ಸೂರಿ ಕಾಂಬಿನೇಷನ್‌ ಮಾತುಕತೆ ಹಂತದಲ್ಲೇ ಮುರಿದುಬಿದ್ದಿದೆ.

ಅಂತೂ ಇಂತೂ ಹೊಸ ಸಿನಿಮಾ ಮಾಡೋಕೆ ಆಕ್ಷನ್ ಪ್ರಿನ್ಸ್ ಸಜ್ಜಾಗಿದ್ದಾರೆ. '777 ಚಾರ್ಲಿ' ರೀತಿಯ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟಿದ್ದ ಕಿರಣ್ ರಾಜ್ ನಿರ್ದೇಶನದಲ್ಲಿ ಧ್ರುವ ನಟಿಸುತ್ತಾರೆ ಎನ್ನಲಾಗ್ತಿದೆ. ಅಕ್ಟೋಬರ್ 6 ರಂದು ಹುಟ್ಟುಹಬ್ಬದ ಸಂಭ್ರಮದಲ್ಲೇ ಈ ಕ್ರೇಜಿ ಕಾಂಬಿನೇಷನ್ ಸಿನಿಮಾ ಘೋಷಣೆ ಆಗುತ್ತದೆ ಎನ್ನುವ ಚರ್ಚೆ ನಡೀತಿದೆ. ಭರ್ಜರಿ ಟೈಟಲ್ ಪೋಸ್ಟರ್ ಡಿಸೈನ್ ಮಾಡಲಾಗ್ತಿದೆ. ಬಹಳ ಹಿಂದೆಯೇ ಇಬ್ಬರಿಬ್ಬ ಕಾಂಬೊ ಬಗ್ಗೆ ಗುಸುಗುಸು ಕೇಳಿಬಂದಿತ್ತು. ಅದು ಈಗ ನಿಜವಾಗ್ತಿದೆ.

ಧ್ರುವ ಸರ್ಜಾ ನಟನೆಯ ಸಿನಿಮಾಗಳಿಗೆ ವಿಘ್ನಗಳು ಒಂದೆರಡಲ್ಲ. ಮೊದಲ ಚಿತ್ರದಿಂದಲೇ ಇದು ಆರಂಭವಾಯಿತು. ಪ್ರತಿ ಚಿತ್ರವೂ ಬಿಡುಗಡೆ ಆಗುವುದು ತಡವಾಗುತ್ತಲೇ ಬರ್ತಿದೆ. 'ಅದ್ಧೂರಿ', 'ಬಹದ್ಧೂರ್', 'ಭರ್ಜರಿ', 'ಪೊಗರು', 'ಮಾರ್ಟಿನ್', 'KD' ಸಿನಿಮಾಗಳಲ್ಲಿ ಇದು ಮುಂದುವರೆಯಿತು. ಇದೀಗ 'ಕ್ರಿಮಿನಲ್' ಸಿನಿಮಾ ವಿಚಾರದಲ್ಲೂ ಇದು ಮುಂದುವರೆದಿದೆ. ಸ್ಟಾರ್ ನಟರು ವರ್ಷಕ್ಕೆ ಎರಡು, ಕೊನೆಪಕ್ಷ ಒಂದು ಸಿನಿಮಾ ಆದರೂ ಮಾಡಬೇಕು ಎನ್ನುವ ಆಗ್ರಹ ಕೇಳಿಬರ್ತಿದೆ. ಆದರೆ ಧ್ರುವ ಸರ್ಜಾ ಅವರಿಂದ ಇದು ಸಾಧ್ಯವಾಗ್ತಿಲ್ಲ.

'777 ಚಾರ್ಲಿ' ಬಳಿಕ ಕಿರಣ್ ರಾಜ್ ಯಾವುದೇ ಸಿನಿಮಾ ಕಟ್ಟಿಕೊಡಲಿಲ್ಲ. ನಾಲ್ಕು ವರ್ಷಗಳ ಬಳಿಕ ಧ್ರುವ ಸರ್ಜಾ ಜೊತೆ ಕೈಜೋಡಿಸುತ್ತಿದ್ದಾರೆ. ಈ ನಡುವೆ ಅವರ ಮದುವೆ ಕೂಡ ನಡೀತು. ಇನ್ನು ಧ್ರುವ ಒಂದೊಳ್ಳೆ ಬ್ರೇಕ್‌ಗಾಗಿ ಕಾಯುತ್ತಿದ್ದಾರೆ. ಅದಕ್ಕೆ ಕಿರಣ್ ರಾಜ್ ಸಾಥ್ ಸಿಗುತ್ತಾ ಕಾದು ನೋಡಬೇಕಿದೆ.