ಒಂದ್ಕಡೆ ಬಿಗ್‌ಬಾಸ್ ಶೋ ನಿರೂಪಣೆ.. ಮತ್ತೊಂದು ಕಡೆ 'ಬಿಲ್ಲ ರಂಗ ಬಾಷ' ಸಿನಿಮಾ ಚಿತ್ರೀಕರಣದಲ್ಲಿ ಕಿಚ್ಚ ಸುದೀಪ್ ಬ್ಯುಸಿಯಾಗಿದ್ದಾರೆ. ಮುಂದೆ 'ದೇವರಾಯ' ಎಂಬ ಐತಿಹಾಸಿಕ ಕಥಾಹಂದರ ಚಿತ್ರಗಳಿಗೆ ಸಿದ್ಧತೆ ನಡೆಸಿದ್ದಾರೆ. ಮುಖ್ಯವಾಗಿ ಪಾತ್ರಗಳಿಗಾಗಿ ದೇಹ ಹುರಿಗೊಳಿಸಿ ತಯಾರಾಗುತ್ತಿದ್ದಾರೆ. ಕಿಚ್ಚನ ಹೊಸ ಲುಕ್ ರಿವೀಲ್ ಆಗಿದೆ.

ಸೆಪ್ಟೆಂಬರ್ 27ರಂದು ಡಾ.ವಿಷ್ಣುವರ್ಧನ ಅಮೃತ ಮಹೋತ್ಸವ ಕಾರ್ಯಕ್ರಮ ನಡೀತಿದೆ. ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಬೆಳಗ್ಗೆ 6ರಿಂದ ರಾತ್ರಿ 12ರ ತನಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದಾದಾ ಜೊತೆ ಕೆಲಸ ಮಾಡಿದ ಖ್ಯಾತನಾಮರು ಭಾಗಿ ಆಗುತ್ತಿದ್ದಾರೆ. ಸುದೀಪ್ ಹಾಗೂ ವಿಷ್ಣು ಒಡನಾಟದ ಬಗ್ಗೆ ಗೊತ್ತೇಯಿದೆ. ದಾದಾಗೆ ಕಿಚ್ಚ ದೊಡ್ಡ ಅಭಿಮಾನಿ ಆಗಿದ್ದರು. 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಡಾ.ವಿಷ್ಣುವರ್ಧನ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಕಿಚ್ಚನಿಗೂ ಆಮಂತ್ರಣ ನೀಡಲಾಗಿದೆ.

ಡಾ. ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಈ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸೇರಿ ಹಲವರು ಸಾಥ್ ನೀಡಿದ್ದಾರೆ. ಕಿಚ್ಚನಿಗೂ ಶ್ರೀನಿವಾಸ್ ಆಪ್ತರು. ಇದೀಗ ಕಾರ್ಯಕ್ರಮಕ್ಕೆ ಸುದೀಪ್ ಅವರಿಗೆ ಆಹ್ವಾನ ನೀಡಿದ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಕಿಚ್ಚನ ಹೊಸ ಲುಕ್ ಫೋಟೊವನ್ನು ಹಾಕಿದ್ದಾರೆ.

"ಇನ್ವಿಟೇಶನ್ ಕೊಟ್ಟ ತಕ್ಷಣ... ಎಷ್ಟೊತ್ತಿಗೆ ಬರಬೇಕು ಅಂದ್ರು... ನಾನು ಸಮಯ ಹೇಳ್ದೆ. ಮುಂದರಿದು ಮತ್ತೇನಾದ್ರೂ ಅಂದ್ರು... ವೇದಿಕೆಯಲ್ಲಿ ಒಂದು ಹಾಡು ಹಾಡಿ ಅಂದೆ... ಖಂಡಿತ ಹಾಡ್ತೀನಿ ಅಂದ್ರು" ಎಂದು ಸುದೀಪ್ ಅವರ ಬಗ್ಗೆ ವೀರಕಪುತ್ರ ಶ್ರೀನಿವಾಸ್ ಬರೆದುಕೊಂಡಿದ್ದಾರೆ.

'ಬಿಲ್ಲಾ ರಂಗ ಭಾಷಾ' ಜಗತ್ತಿನಲ್ಲಿ ಒಂದೆರಡು ಗಂಟೆ ವಿಹರಿಸಿದೆ. ಅಲ್ಲಿ ಅದ್ಭುತ ಲೋಕವೊಂದು ಸೃಷ್ಟಿಯಾಗಿದೆ. ಸಾವಿರಾರು ಜನ ಕೆಲಸ ಮಾಡ್ತಿದ್ದಾರೆ. ಮೂರು ಮೂರು ಪಾತ್ರಗಳಿಗೆ ಸುದೀಪ್ ಅವ್ರು ಜೀವ ತುಂಬ್ತಿದ್ದಾರೆ. ನಿನ್ನೆ ರಂಗನನ್ನು ಕಣ್ತುಂಬಿಕೊಳ್ಳುವ ಅವಕಾಶವಷ್ಟೇ ನನಗೆ ಸಿಕ್ತು. ದೇವರಾಯ ಚಿತ್ರಕ್ಕಾಗಿ ದೇಹರಾಯನನ್ನು ಹುರಿಗೊಳಿಸ್ತಿದ್ದಾರೆ. ಅವರನ್ನು ನೋಡಿದ ಕೂಡಲೇ ವಾಹ್ ಎನಿಸಿವಂತಹ ಕಟ್ಟುಮಸ್ತಾದ ಮೈಕಟ್ಟು ಎಂದು ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.