ಬಹುಭಾಷಾ ನಟಿ ಕೀರ್ತಿ ಸುರೇಶ್ ಈಗ ಬಾಲಿವುಡ್ ಅಂಗಳ ಕೂಡ ಪ್ರವೇಶಿಸಿದ್ದಾರೆ. ಹಿಂದಿ ಸಿನಿಮಾ, ವೆಬ್ ಸೀರಿಸ್‌ಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಇನ್ನು ತಮಿಳು, ತೆಲುಗಿನಲ್ಲೂ ಮಹಾನಟಿ ಬ್ಯುಸಿಯಾಗಿದ್ದಾರೆ. ಈ ವಾರ ಆಕೆ ನಟಿಸಿರುವ 'ಸತ್ಯವಾನ್ ಸಾವಿತ್ರಿ' ಸಿನಿಮಾ ಬಿಡುಗಡೆ ಆಗ್ತಿದೆ. ಚಿತ್ರದ ಪ್ರಚಾರದ ವೇಳೆ ವೇದಿಕೆಯಲ್ಲಿ ಕೀರ್ತಿ ಹಾಗೂ ನಟ, ನಿರ್ಮಾಪಕ ಮಿಸ್ಕಿನ್ ಅಕ್ಕಪಕ್ಕ ಕೂತಿದ್ದರು. ಈ ವೇಳೆ ಆಕೆಯನ್ನು ಮಿಸ್ಕಿನ್ ಅಸಭ್ಯವಾಗಿ ಮುಟ್ಟಿದ್ದಾರೆ ಎಂದು ವೀಡಿಯೋವೊಂದು ವೈರಲ್ ಆಗ್ತಿದೆ.

ಮಿಸ್ಕಿನ್ ಸಿನಿಮಾ ಬಗ್ಗೆ ಮಾತನಾಡುತ್ತಾ 'ಡೊರೊತಿ' ಚಿತ್ರದಲ್ಲಿ ಕೀರ್ತಿ ನಟನೆಯನ್ನು ಕೊಂಡಾಡಿದ್ದರು. ಈ ವೇಳೆ ಪಕ್ಕದಲ್ಲಿದ್ದ ಕೀರ್ತಿ ಸುರೇಶ್ ಕಾಲಿನ ಮೇಲಿನ ಕೈ ಇಡುವುದು, ಆಕೆ ದೂರ ತಳ್ಳುವಂತೆ ಆ ವೀಡಿಯೋದಲ್ಲಿ ಕಂಡುಬಂದಿದೆ. ಮಿಸ್ಕಿನ್ ನಡೆಯಿಂದ ಕೀರ್ತಿ ಸುರೇಶ್ ಅನ್‌ಕಂಫರ್ಟಬಲ್ ಫೀಲ್ ಆಗಿದ್ದಾರೆ ಎಂದು ಸೋಶಿಯ್ ಮೀಡಿಯಾದಲ್ಲಿ ಟ್ರೋಲ್ ಆಗ್ತಿದೆ. ಈ ಬಗ್ಗೆ ಕೀರ್ತಿ ಸುರೇಶ್ ಇದೀಗ ಪ್ರತಿಕ್ರಿಯಿಸಿದ್ದರು ಟ್ರೋಲಿಗರಿಗೆ ತಿರುಗೇಟು ಕೊಟ್ಟಿದ್ದಾರೆ. ನಮ್ಮಿಬ್ಬರದ್ದು ತಂದೆ- ಮಗಳ ಬಾಂಧವ್ಯ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಆ ವೀಡಿಯೋ ಪೋಸ್ಟ್ ಮಾಡಿ ನೆಟ್ಟಿಗನೊಬ್ಬ "ಇವ್ರೆಲ್ಲಾ ಸಿನಿಮಾಗಳಲ್ಲಿ ನಟರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ, ಅವ್ರು ಎಲ್ಲಿ ಮುಟ್ಟಿದರೂ ನಗುತ್ತಲೇ ಇರುತ್ತಾರೆ. ಮಿಸ್ಕಿನ್ ಹೀಗೆ ಮುಟ್ಟಿದ್ದಕ್ಕೆ ಮುಖ ಯಾಕೆ ಹಂಗೆ ಮಾಡಿಕೊಂಡ್ರು? ನಿಮಗೆ ಏನು ಅನಿಸುತ್ತೆ?" ಎಂದು ಬರೆದುಕೊಂಡಿದ್ದ. ಇದು ಕೀರ್ತಿ ಸುರೇಶ್ ಗಮನಕ್ಕೆ ಬಂದಿದ್ದು ಆಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

"ಮೊದಲನೆಯದಾಗಿ ನನ್ನ ಮುಖದಲ್ಲಿ ಅನ್‌ಕಂಫರ್ಟಬಲ್ ಕಾಣಿಸ್ತಾ? ನಮ್ಮಿಬ್ಬರದ್ದು ತಂದೆ, ಮಗಳ ಬಾಂಧವ್ಯ ಎಂದು ನಾವಿಬ್ಬರು ಹೇಳಿದ್ದು ನಿಮಗೆ ಗೊತ್ತಾಗಲಿಲ್ವಾ ? ಎರಡನೆಯದಾಗಿ ಒಂದು ವೇಳೆ ನಾನು ಅನ್‌ಕಂಫರ್ಟಬಲ್ ಫೀಲ್ ಆಗಿದ್ದೀನಿ ಅಂದುಕೊಳ್ಳೋಣ, ಸಿನಿಮಾಗಳಲ್ಲಿ ಹಾಗೆ ಒಟ್ಟಿಗೆ ಕಾಣಿಸಿಕೊಳ್ಳುವುದರಿಂದ ಸಾರ್ವಜನಿಕವಾಗಿ ಆ ರೀತಿ ನಡೆದಾಗ ಕೂಡ ಸಹಿಸಿಕೊಳ್ಳಬೇಕು ಎಂದು ನೀವು ಹೇಳುತ್ತಿದ್ದೀರಾ? ಬ್ರದರ್..ನೀವು ಕೆಲವು ವಿಷಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ" ಎಂದು ಕೀರ್ತಿ ಸುರೇಶ್ ಟ್ವೀಟ್ ಮಾಡಿದ್ದಾರೆ.