ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ನಟಿ ಬಿ. ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಕಳೆದ ವರ್ಷ ಸೆಪ್ಟೆಂಬರ್ 11ರಂದು ಘೋಷಣೆ ಮಾಡಿದ್ರು ಈವರೆಗೆ ಕಾರ್ಯಕ್ರಮ ನಡೆಸಿ ಪ್ರಶಸ್ತಿ ಪ್ರದಾನ ಮಾಡಿಲ್ಲ. ಇದು ಅಭಿಮಾನಿಗಳು ಬೇಸರಕ್ಕೆ ಕಾರಣವಾಗಿದೆ. ವಿಷ್ಣುವರ್ಧನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಮತ್ತೆ ಅಭಿಮಾನಿಗಳು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಪ್ರತಿಕ್ರಿಯಿಸಿದ್ದಾರೆ.
ಅನಿರುದ್ಧ್ ಜತ್ಕರ್ ವೀಡಿಯೋ ಮಾತನಾಡಿದ್ದಾರೆ. ವಿಷ್ಣು ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಪ್ರೀತಿ ಕಂಡು ಧನ್ಯವಾದ ತಿಳಿಸಿದ್ದಾರೆ. ಬಳಿಕ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ವಿಚಾರದ ಬಗ್ಗೆ ಮಾತನಾಡಿದ್ದಾರೆ. "ಬಹಳ ಜನ ಅಪ್ಪಾಜಿಗೆ ಕರ್ನಾಟಕ ರತ್ನ ಯಾವಾಗ ಕೊಡ್ತಾರೆ ಎಂದು ಕೇಳಿದ್ರು. ನಾವು ಕೂಡ ಈ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸುತ್ತಿದ್ದೇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ನೇಮಕ ಆಗಬೇಕಿತ್ತು. ನೇಮಕಾ ಆದ್ಮೇಲೆ ಅವ್ರು ಅಕ್ಕ ಸಮ್ಮೇಳನಕ್ಕಾಗಿ ಅಮೆರಿಕಾಗೆ ಹೋಗಿದ್ರು. ಬಳಿಕ ಬಂದು ಮುಖ್ಯಮಂತ್ರಿ ಜೊತೆ ಚರ್ಚಿಸಬೇಕಿತ್ತು. ಈಗ ಚರ್ಚೆ ಆಗಿದೆ. ನವೆಂಬರ್ 1ರಂದು ರಾಜ್ಯೋತ್ಸವ ಕಾರ್ಯಕ್ರಮ ಆದ್ಮೇಲೆ ನವೆಂಬರ್ 10ನೇ ತಾರೀಖಿನ ಒಳಗೆ ಕಾರ್ಯಕ್ರಮ ಮಾಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ" ಎಂದು ಸಿಹಿಸುದ್ದಿ ಹಂಚಿಕೊಂಡಿದ್ದಾರೆ.
ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎನ್ನುವುದು ಅಭಿಮಾನಿಗಳ ಮನವಿ ಆಗಿತ್ತು. ಕಳೆದ ವರ್ಷ ಜುಲೈನಲ್ಲಿ ಅಂದಿನ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಅನಿರುದ್ಧ್ ಜತ್ಕರ್ ಮನವಿ ಮಾಡಿದ್ದರು. ಅದೇ ರೀತಿ ನಟಿಯರಾದ ಜಯಮಾಲಾ, ಶ್ರುತಿ ಮತ್ತು ಮಾಳವಿಕಾ ಅವಿನಾಶ್ ಅಂದಿನ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಭೇಟಿಯಾಗಿ ಬಿ.ಸರೋಜಾ ದೇವಿ ಅವರಿಗೂ 'ಕರ್ನಾಟಕ ರತ್ನ' ಪ್ರಶಸ್ತಿ ನೀಡುವಂತೆ ಮನವಿ ಮಾಡಿದ್ದರು. ಚಿತ್ರರಂಗಕ್ಕೆ ಇಬ್ಬರ ಸೇವೆ ಪುರಸ್ಕರಿಸಿ ಪ್ರಶಸ್ತಿ ನೀಡುವಂತೆ ಕೇಳಿಕೊಂಡಿದ್ದರು. ಅಂತಿಮವಾಗಿ ಸರ್ಕಾರ ಪ್ರಶಸ್ತಿ ನೀಡಲು ಒಪ್ಪಿಗೆ ಸೂಚಿಸಿತ್ತು.
ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು. ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ನಡೆಸಿ ಪ್ರಶಸ್ತಿ ವಿತರಣೆ ಮಾಡಿದ್ದರು. ವಿವಿಧ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಕೊಡುಗೆ ನೀಡಿರುವ 9 ಜನ ಮಹನೀಯರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿದೆ. ವಿಷ್ಣು, ಸರೋಜಾದೇವಿ ಸೇರಿ ಆ ಸಂಖ್ಯೆ 11ಕ್ಕೆ ಏರಿದೆ. 1992ರಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಸಾಹಿತಿ ಕುವೆಂಪು ಹಾಗೂ ಸಿನಿಮಾ ಕ್ಷೇತ್ರಕ್ಕೆ ನಟ ಡಾ. ರಾಜ್‌ಕುಮಾರ್ ಕರ್ನಾಟಕ ರತ್ನ ಪ್ರಶಸ್ತಿ ಪಡೆದಿದ್ದರು.
1999ರಲ್ಲಿ ರಾಜಕೀಯ ಕ್ಷೇತ್ರದಲ್ಲಿ ಎಸ್. ನಿಜಲಿಂಗಪ್ಪ, 2000ರಲ್ಲಿ ವಿಜ್ಞಾನ ಕ್ಷೇತ್ರಕ್ಕಾಗಿ ಸಿ ಎನ್. ಆರ್ ರಾವ್, 2005ರಲ್ಲಿ ಸಂಗೀತ ಕ್ಷೇತ್ರದಲ್ಲಿ ಭೀಮಸೇನ ಜೋಷಿ, 2007ರಲ್ಲಿ ಸಾಮಾಜಿಕ ಸೇವೆಗಾಗಿ ಶಿವಕುಮಾರ ಸ್ವಾಮಿಜಿ, 2008ರಲ್ಲಿ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಡಾ. ಡಿ. ಜವರೇಗೌಡ, 2009ರಲ್ಲಿ ಸಾಮಾಜಿಕ ಸೇವೆಗಾಗಿ ವೀರೇಂದ್ರ ಹೆಗ್ಗೆಡೆ ಹಾಗೂ 2022ರಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಈ ಪ್ರಶಸ್ತಿ ಸಿಕ್ಕಿತ್ತು.