ಕನ್ನಡ ಚಿತ್ರನಟ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ಇಲ್ಲದೇ ಇದ್ದರೂ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಅಸಂಖ್ಯಾತ ಅಭಿಮಾನಿಗಳು ಅವರನ್ನು ಆರಾಧಿಸುತ್ತಾರೆ. ಆದರೆ ಅಪ್ಪು ನಿಧನದ ಬೆನ್ನಲ್ಲೇ ಯುವಕನೊಬ್ಬ ಅವರ ಬಗ್ಗೆ ಕೆಟ್ಟದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಯುವಕನನ್ನು ತರಾಟೆಗೆ ತೆಗೆದುಕೊಂಡಿದೆ.

"ಪುನೀತ್‌ ರಾಜ್‌ಕುಮಾರ್ ಮದ್ಯ ಸೇವನೆ ಮಾಡುವುದನ್ನು ವಿರೋಧಿಸುತ್ತಿದ್ದರು. ಆದರೆ ಸೋಶಿಯಲ್ ಮೀಡಿಯಾ ಇದೆ ಎಂದು ಮನಸ್ಸಿಗೆ ಬಂದಂತೆ ಪೋಸ್ಟ್ ಮಾಡಬಹುದಾ? ಎಂದು ಆರೋಪಿ ರಿತ್ವಿಕ್ ಶರ್ಮಾಗೆ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ರಿತ್ವಿಕ್ ವಿರುದ್ಧ ನಗರದ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತು ಆನಂತರದ ಕಾನೂನು ಪ್ರಕ್ರಿಯೆ ರದ್ದು ಕೋರಿ ರಿತ್ವಿಕ್‌ ಶರ್ಮಾ ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯಾಯಾಲಯ ಪುರಸ್ಕರಿಸಿದೆ.

ರಿತ್ವಿಕ್ ಭಾರತೀಯ ನಿವಾಸಿಯಲ್ಲ. ಕೆಲ ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದಾನೆ. ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾನೆ ಎನ್ನುವುದನ್ನು ಪರಿಗಣಿಸಿ, ಆತನ ವಿರುದ್ಧ ಕ್ರಿಮಿನಲ್‌ ಪ್ರಕ್ರಿಯೆ ಬೇಡ ಎಂದು ಎಚ್ಚರಿಕೆ ನೀಡಿ, ಅರ್ಜಿದಾರನಿಗೆ ತಿಳಿ ಹೇಳುವಂತೆ ವಕೀಲರಿಗೆ ನಿರ್ದೇಶಿಸಿ, ಆತನ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. "ರಿತ್ವಿಕ್ ಯಾವ ಅರ್ಥದಲ್ಲಿ ಈ ಪೋಸ್ಟ್‌ ಮಾಡಿದ್ದಾನೆ ಎನ್ನುವುದಕ್ಕಿಂತ ಆ ಸಂದರ್ಭ ಯಾವ್ದು ಎನ್ನುವುದನ್ನು ನೋಡಬೇಕು. ಪುನೀತ್ ನಿಧನದ ಸಂದರ್ಭದಲ್ಲಿ ಇಂತಹ ಅವಹೇಳನಕಾರಿ ಪೋಸ್ಟ್ ಸರಿ ಅಲ್ಲ. ಈ ಬಗ್ಗೆ ಆತನಿಗೆ ಅರಿವು ಇರಬೇಕಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ರಿತ್ವಿಕ್ ಪರ ವಕೀಲರು ಮಾತನಾಡಿ "ಆತ ಲಂಡನ್‌‌ನಲ್ಲಿ ಹುಟ್ಟಿ ಬೆಳೆದಿದ್ದು. ಹಾಗಾಗಿ ಈ ಪೋಸ್ಟ್‌ನ ಪರಿಣಾಮ ಏನು ಎನ್ನುವುದು ಆತನಿಗೆ ಗೊತ್ತಿರಲಿಲ್ಲ. ತನ್ನ ತಪ್ಪಿಗೆ ರಿತ್ವಕ್ ವಿಷಾದ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಶರ್ಮಾನ ಸ್ನೇಹಿತ ಪೋಸ್ಟ್ ಹಾಕಿದ್ದಾನೆ. ಕ್ರಿಮಿನಲ್‌ ಪ್ರಕ್ರಿಯೆ ಮುಂದುವರಿಸುವುದು ಆತನ ಭವಿಷ್ಯಕ್ಕೆ ಸಮಸ್ಯೆ ಆಗುತ್ತದೆ. ಹಾಗಾಗಿ ಕಾನೂನು ಪ್ರಕ್ರಿಯೆ ವಜಾಗೊಳಿಸಬೇಕು" ಎಂದು ಮನವಿ ಮಾಡಿದ್ದರು.

ಏನಿದು ಘಟನೆ ?

1.11.2021ರಂದು ಕಿಂಗ್‌ಫಿಷರ್‌ ಬಿಯರ್‌ ಬಾಟಲಿ ಹಿಡಿದು ರಿತ್ವಿಕ್ ಶರ್ಮಾ ಮಾಡಿದ್ದ ಅಸಭ್ಯ ಪೋಸ್ಟ್ ವೈರಲ್ ಆಗಿತ್ತು. ಈ ಪೋಸ್ಟ್ ಸಾಮಾಜಿಕ ಶಾಂತಿಗೆ ಭಗ್ನ ತರುವ ಕೃತ್ಯ ಎಂದು ಭಾವಿಸಿ ಸುಬ್ರಹ್ಮಣ್ಯ ನಗರ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದರು.