ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿದ ಬ್ಲಾಕ್‌ಬಸ್ಟರ್ ಸಿನಿಮಾ 'ಕಾಂತಾರ'. ಅಂದಹಾಗೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಿತ್ತು. ಬಳಿಕ ಪ್ರೀಕ್ವೆಲ್ ಕೂಡ ಬಂದು 800 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಅಲ್ಲಿಯವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಈಗ ರಿಷಬ್ ಶೆಟ್ಟಿ ಹಾಗೂ ವಿಜಯ್ ಕಿರಗಂದೂರ್ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ. ಆದರೆ ಕಾರಣ ಏನು ಎನ್ನುವುದು ಮಾತ್ರ ಸ್ಪಷ್ಟವಾಗಿ ಗೊತ್ತಿಲ್ಲ. 'ಕಾಂತಾರ' ಸಿನಿಮಾ 4 ವರ್ಷ ಪೂರೈಸಿದ ಸಂಭ್ರಮದಲ್ಲಿ ಕೂಡ ಆ ವೈಮನಸ್ಸು ಬಹಿರಂಗವಾಗಿದೆ.

ಸೆಪ್ಟೆಂಬರ್ 30, 2022ರಂದು 'ಕಾಂತಾರ' ಸಿನಿಮಾ ತೆರೆಗೆ ಬಂದಿತ್ತು. ಕರಾವಳಿ ಭಾಗದ ಆಚಾರ ವಿಚಾರ, ಅಲ್ಲಿನ ಆಚರಣೆಗಳ ಜೊತೆಗೆ ಮನುಷ್ಯ ಹಾಗೂ ಅರಣ್ಯದ ನಡುವಿನ ಸಂಘರ್ಷದ ಕಥೆಯನ್ನು ತೆರೆಗೆ ತಂದು ರಿಷಬ್ ಶೆಟ್ಟಿ ಗೆದ್ದಿದ್ದರು. ಕಾಡುಬೆಟ್ಟು ಶಿವನಾಗಿ ಅದ್ಭುತವಾಗಿ ನಟಿಸಿ ಜಾದೂ ಮಾಡಿದ್ದರು. ಬರೀ ಕನ್ನಡದಲ್ಲಿ ಬಿಡುಗಡೆ ಆಗಿದ್ದ ಸಿನಿಮಾ ನೋಡ್ತಾ ನೋಡ್ತಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ವಿವಿಧ ಭಾಷೆಗಳಿಗೆ ಡಬ್ ಆಗಿ ಹಿಟ್ ಆಗಿತ್ತು. ಅಂದಾಜು 16 ಕೋಟಿ ರೂ. ಬಜೆಟ್ ಸಿನಿಮಾ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.

ಸಿನಿಮಾ ತೆರೆಕಂಡು ನಾಲ್ಕು ವರ್ಷ ಪೂರೈಸಿರುವ ಸಂಭ್ರಮವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಹಾಗೂ ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ನೆನಪಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಪೋಸ್ಟ್‌ನಲ್ಲಿ ಹೊಂಬಾಳೆ ಫಿಲ್ಮ್ಸ್ ಹೆಸರಿಲ್ಲ, ಟ್ಯಾಗ್ ಕೂಡ ಮಾಡಿಲ್ಲ. ಬಳಿಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಅಧಿಕೃತ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಕೂಡ 'ಕಾಂತಾರ' ಸಿನಿಮಾ ಸಕ್ಸಸ್ ಅನ್ನು ನೆನಪಿಸಿಕೊಳ್ಳಲಾಗಿದೆ. ಆದರೆ ಈ ಪೋಸ್ಟ್‌ನಲ್ಲಿ ಕೂಡ ರಿಷಬ್ ಶೆಟ್ಟಿ ಹೆಸರಿಲ್ಲ. ಅವರನ್ನು ಟ್ಯಾಗ್ ಮಾಡುವ ಗೋಜಿಗೆ ಹೋಗಿಲ್ಲ. ಆ ಮೂಲಕ ಇಬ್ಬರೂ ಮುನಿಸು ಪ್ರದರ್ಶಿಸಿರುವುದು ಗೊತ್ತಾಗ್ತಿದೆ.

'ಕಾಂತಾರ'- 1 ಚಿತ್ರದ ಸಂಭಾವನೆ ವಿಚಾರದಲ್ಲಿ ವಿಜಯ್ ಕಿರಗಂದೂರ್ ಹಾಗೂ ಹೊಂಬಾಳೆ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಸ್ವತಃ ರಿಷಬ್ ಶೆಟ್ಟಿ ದೊಡ್ಡ ಸಿನಿಮಾಗಳ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಮುಂದೆ 'ಕಾಂತಾರ- 2' ಚಿತ್ರವನ್ನು ಕೂಡ ತಾವೇ ನಿರ್ಮಿಸಲು ಮುಂದಾಗುತ್ತಿದ್ದಾರೆ. ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಟ್ಟವರು ಹೀಗೆ ದೂರಾಗಿರುವುದು ಬೇಸರದ ಸಂಗತಿ.

ಅಂದಹಾಗೆ 'ಕಾಂತಾರ' ಸರಣಿ ಸಿನಿಮಾಗಳ ಗೆಲುವಿನಲ್ಲಿ ರಿಷಬ್ ಹಾಗೂ ವಿಜಯ್ ಕಿರಗಂದೂರ್ ಪಾಲು ದೊಡ್ಡದಿದೆ. ಅಂತಾದೊಂದು ಕಥೆಯನ್ನು ಮಾಡಿ ನಿರ್ದೇಶನ ಮಾಡಿ ಗೆದ್ದವರು ರಿಷಬ್. ಅದೇ ರೀತಿ ಕೋವಿಡ್ ಸಂಕಷ್ಟದ ಸಮಯದಲ್ಲಿ 15 ಕೋಟಿ ರೂ. ಖರ್ಚು ಮಾಡಿ ಆ ಸಿನಿಮಾ ಮಾಡುವ ಧೈರ್ಯ ಮಾಡಿದ್ದು, ರಿಷಬ್ ಕನಸಿಗೆ ರೆಕ್ಕೆಪುಟ್ಟ ಕಟ್ಟಿದ್ದು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ. ಹಾಗಾಗಿ ಕೊನೆ ಪಕ್ಷ ಆ ಸಿನಿಮಾವನ್ನು ನೆನಪಿಸಿಕೊಳ್ಳುವಾಗ ಅವರವರ ಕ್ರೆಡಿಟ್ ಇಬ್ಬರೂ ಕೊಟ್ಟುಬಿಟ್ಟಿದ್ದರೆ ಚೆನ್ನಾಗಿತ್ತು. ಹೀಗೆ ಚಿಕ್ಕ ಮಕ್ಕಳ ರೀತಿ ಆಡುವುದು ಸರಿಯಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸ್ತಿದ್ದಾರೆ.