ಶೈನ್‌ ಶೆಟ್ಟಿ ನಿರ್ಮಿಸಿ ನಟಿಸಿರುವ 'ಶಂಕರಾಭರಣ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅದಕ್ಕೂ ಮುನ್ನ ವಿದೇಶದಲ್ಲಿ ಸಿನಿಮಾ ಸದ್ದು ಮಾಡ್ತಿದೆ. ಚೀನಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ.

39ನೇ ಚೀನಾ ಫಿಲ್ಮ್ ಗೋಲ್ಡನ್ ರೂಸ್ಟರ್ ಆ್ಯಂಡ್ ಹಂಡ್ರೆಡ್ ಫ್ಲವರ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಆಯ್ಕೆಯಾಗಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರ ಇದಾಗಿದೆ. 'ರೈಡ್' ಹಾಗೂ 'ಮಹಾರಾಜ' ಚಿತ್ರಗಳ ಬಳಿಕ ಈ ಚಿತ್ರೋತ್ಸವದಲ್ಲಿ 'ಶಂಕರಾಭರಣ' ಸಿನಿಮಾ ಪ್ರದರ್ಶನ ಕಂಡಿದ್ದು ವಿಶೇಷ.

ಜಗತ್ತಿನ ಬೇರೆ ಬೇರೆ ದೇಶಗಳ ಚಿತ್ರಗಳ ನಡುವೆ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸುವ ಅವಕಾಶ ಕನ್ನಡದ 'ಶಂಕರಾಭರಣ' ಚಿತ್ರಕ್ಕೆ ಸಿಕ್ಕಿದೆ. ವಿದೇಶಿ ಪ್ರೇಕ್ಷಕರು ಕನ್ನಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೈಲರ್ ಬಿಡುಗಡೆ ಆಗಿ ಸಖತ್ ರೆಸ್ಪಾನ್ಸ್ ಪಡೆದುಕೊಂಡಿತ್ತು.

ಚಿತ್ರದಲ್ಲಿ ಬಸ್ ಡ್ರೈವರ್ ಪಾತ್ರದಲ್ಲಿ ಶೈನ್ ಶೆಟ್ಟಿ ಮಿಂಚಿದ್ದಾರೆ. ಸ್ವತಃ ಕಥೆ ಬರೆದು ಚಿತ್ರವನ್ನು ಪ್ರೇಕ್ಷಕರ ಮುಂದೆ ತರ್ತಿದ್ದಾರೆ. ಸುಮಂತ್ ಭಟ್ 'ಶಂಕರಾಭರಣ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕರಾವಳಿ ಮತ್ತು ಮಲೆನಾಡಿ ಭಾಗಗಳಲ್ಲಿ ಖಾಸಗಿ ಬಸ್‌ಗಳ ದರ್ಬಾರ್ ಇವತ್ತಿಗೂ ಜೋರಾಗಿದೆ. ಅಂತಹ ಖಾಸಗಿ ಬಸ್ ಶಂಕರಾಭರಣ ಜರ್ನಿ ಕಥೆ ಇದು. ಕರಾವಳಿ ಭಾಗದ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.

ತಮ್ಮ ಜೀವನದ ಕೆಲ ಅನುಭವಗಳಿಗೆ ಶೈನ್ ಶೆಟ್ಟಿ ದೃಶ್ಯ ರೂಪ ಕೊಡುವ ಸಾಹಸ ಮಾಡಿದ್ದಾರೆ. ತನ್ವಿ ರಾಮ್ ನಾಯಕಿಯಾಗಿ ಮಿಂಚಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ. ಸಂಪತ್ ಕುಮಾರ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಶಂಕರಾಭರಣ ಹೆಸರಿನ ಬಸ್ ಚಿತ್ರದ ಕೇಂದ್ರ ಬಿಂದು. ಟ್ರೈಲರ್ ನೋಡಿದ್ರೆ ಕಾಮಿಡಿ ಹಾರರ್ ಜಾನರ್ ಸಿನಿಮಾ ಎನ್ನುವುದು ಗೊತ್ತಾಗ್ತಿದೆ.