ಕನ್ನಡ ಚಿತ್ರರಂಗದ ಸೋಲು ಗೆಲುವಿನ ಆಟ ಮುಂದುವರೆದಿದೆ. ದೊಡ್ಡ ಸಿನಿಮಾಗಳೇ ಮುಗ್ಗರಿಸಿದಾಗ ಸಣ್ಣ ಸಿನಿಮಾಗಳು ಗೆದ್ದು ಅಚ್ಚರಿ ಮೂಡಿಸುತ್ತಿವೆ. ಇನ್ನಾದ್ರು ಈ ಸತ್ಯ ಅರಿತು ಕನ್ನಡ ಫಿಲ್ಮ್ ಮೇಕರ್ಸ್ ಸಿನಿಮಾಗಳನ್ನು ಮಾಡ್ಬೇಕಿದೆ. ಸ್ಟಾರ್ ನಟರು ಈ ಹಾದಿಯಲ್ಲಿ ಸಾಗಬೇಕಿದೆ. ಹರ್ಷದ ಕೂಳಿಗೆ ವರ್ಷದ ಕೂಳು ಕಳೆದುಕೊಳ್ಳುವಂತಾಗಬಾರದು.
ಮಲಯಾಳಂ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡ್ತಿದೆ. ಆದರೆ ಬಿಡುಗಡೆಗೂ ಮುನ್ನ ನಮ್ಮದು ಪ್ಯಾನ್ ಇಂಡಿಯಾ ಸಿನಿಮಾ ಎಂದು ಅವರು ಯಾವತ್ತು ಕೊಚ್ಚಿಕೊಳ್ಳುವುದಿಲ್ಲ. ಸೂಪರ್ ಹಿಟ್ 'ದೃಶ್ಯಂ' ಸರಣಿಯ 3ನೇ ಚಿತ್ರವನ್ನು ಕೂಡ ಯಾವುದೇ ಅಬ್ಬರದ ಪ್ರಚಾರ ಇಲ್ಲದೇ ತೆರೆಗೆ ತಂದಿದ್ದರು. ಇದನ್ನು ನೋಡಿ ಕಲಿಯಬೇಕಿದೆ. ಪ್ಯಾನ್ ಇಂಡಿಯಾ ಹುಚ್ಚು ಇನ್ನಾದರೂ ಚಿತ್ರರಂಗವನ್ನು ಬಿಡಬೇಕಿದೆ.
'ಕೆಜಿಎಫ್' ಸರಣಿ ಸಿನಿಮಾಗಳಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶ್ ಜನಪ್ರಿಯತೆ ಪಡೆದಿದ್ದರು. ಹಾಗಾಗಿ 'ಟಾಕ್ಸಿಕ್' ಚಿತ್ರವನ್ನು ದೊಡ್ಡದಾಗಿ ತೆರೆಗೆ ತರುವ ಕನಸು ಕಂಡರು. ತಾವೇ ನಿರ್ಮಾಣಕ್ಕೂ ಕೈ ಜೋಡಿಸಿ ಎಲ್ಲಾ ಜವಾಬ್ದಾರಿ ವಹಿಸಿಕೊಂಡರು. ಸಿನಿಮಾ ಫಲಿತಾಂಶ ಏನೇ ಆಗಿದ್ದರೂ ಅದರಲ್ಲಿ ಅವರಿಗೂ ಪಾಲಿದೆ. 'ಕಾಂತಾರ' ಭರ್ಜರಿ ಸಕ್ಸಸ್ ಕಂಡರೂ ಪ್ರೀಕ್ವೆಲ್ ಮಾಡಲು ರಿಷಬ್ ಹೆಚ್ಚು ಖರ್ಚು ಮಾಡಿಸಲಿಲ್ಲ. ಸಿನಿಮಾ 800 ಕೋಟಿ ರೂ. ಕಲೆಕ್ಷನ್ ಮಾಡಿ ನಿರ್ಮಾಪಕರನ್ನು ಗೆಲುವಿನ ದಡ ಸೇರಿಸಿತ್ತು. ಇನ್ನುಳಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಮ್ಮ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಹಾಗಾಗಿ ಎಲ್ಲರೂ ನ್ಯಾಷನಲ್ ಸ್ಟಾರ್ ಆಗಿಬಿಡಬೇಕು ಎನ್ನುವ ತಿರುಕನ ಕನಸು ಬಿಟ್ಟು ಕನ್ನಡಕ್ಕೆ ಸಿನಿಮಾ ಮಾಡಬೇಕಿದೆ. ಮೂರು ವರ್ಷಕ್ಕೆ ಒಂದಲ್ಲ ವರ್ಷಕ್ಕೆ ಒಂದಾದರೂ ಸಿನಿಮಾ ತೆರೆಗೆ ತರಬೇಕಿದೆ.
ಮೊದಲು ಕನ್ನಡ ಪ್ರೇಕ್ಷಕರನ್ನು ರಂಜಿಸಲು ಒಳ್ಳೆ ಸಿನಿಮಾ ಮಾಡಬೇಕು. 4 ಭಾಷೆಗೆ ಡಬ್ ಮಾಡಿ ಬಿಟ್ಟ ಮಾತ್ರಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಗೆಲ್ಲಲ್ಲ. ತೆಲುಗು ನಟ ನಾನಿ 'ದಿ ಪ್ಯಾರಡೈಸ್' ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಎಂದೇ ಪ್ರಚಾರ ಮಾಡಿದ್ದರು. ಅಲ್ಲಿಗೆ ನಿಧಾನವಾಗಿ ಈ ನಶೆ ಇಳಿಯುತ್ತಿದೆ ಎನ್ನುವುದು ಅರ್ಥವಾಗ್ತಿದೆ. ದೊಡ್ಡ ಸಿನಿಮಾ ಅಂದಾಕ್ಷಣ ನಿರೀಕ್ಷೆ ಹೆಚ್ಚಾಗುತ್ತದೆ. ಅದು ತಲುಪದೇ ಇದ್ದಾಗ ಸಿನಿಮಾ ಸೋಲುತ್ತದೆ. ಹಾಗಾಗಿ "ನವಿಲು ಕುಣಿಯುವುದನ್ನು ನೋಡಿ ಕೆಂಬೂತ ಪುಕ್ಕ ತರ್ಕೊಂಡಿತಂತೆ" ಎನ್ನುವಂತೆ ಆಗುವುದು ಬೇಡ. ಎಲ್ಲವೂ 'ಕೆಜಿಎಫ್', 'ಕಾಂತಾರ' ಆಗಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿದೆ.
ಇದು ಬರೀ ಕನ್ನಡ ಚಿತ್ರರಂಗದ ಕಥೆ ಮಾತ್ರ ಅಲ್ಲ. ತೆಲುಗು, ತಮಿಳಿನಲ್ಲೂ ಇದೇ ಪುನರಾವರ್ತನೆ ಆಗ್ತಿದೆ. ತೆಲುಗಿನಲ್ಲಿ 'ಗೇಮ್‌ಚೇಂಜರ್', 'ಕಣ್ಣಪ್ಪ', 'ದಿ ರಾಜಾ ಸಾಬ್' ಅದೇ ರೀತಿ ತಮಿಳಿನಲ್ಲಿ 'ಕೂಲಿ', 'ಕಂಗುವ' ಹೀಗೆ ದೊಡ್ಡ ಸಿನಿಮಾಗಳು ಸೋತಿವೆ. ಭಾರೀ ಬಜೆಟ್‌ನಲ್ಲಿ ಬಂದ 'ಕಂಗುವ' ಚಿತ್ರಕ್ಕಿಂತ ಚಿಕ್ಕ ಸಿನಿಮಾಗಳಾದ 'ಕರುಪ್ಪು' ಹಾಗೂ 'ವಿಶ್ವನಾಥ್ & ಸನ್ಸ್' ಸೂರ್ಯಗೆ ಬ್ರೇಕ್ ಕೊಟ್ಟಿವೆ. ತೆಲುಗಿನ 'ಇರುಮುಡಿ' ಚಿತ್ರ ಅದೇ ಸಾಲಿಗೆ ಸೇರುತ್ತೆ. 2 ಕೋಟಿ ರೂ. ಬಜೆಟ್ ಸಿನಿಮಾ 'ಹನುಮಾನ್ ಅಂಶ್' ಈಗ 250 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಇದಕ್ಕಿಂತ ಉದಾಹರಣೆ ಬೇಕಾ ?
ರಕ್ಷಿತ್ ಶೆಟ್ಟಿ 4 ವರ್ಷಗಳಿಂದ ಕಣ್ಮರೆ ಆಗಿಬಿಟ್ಟಿದ್ದಾರೆ. ಪ್ಯಾನ್ ಇಂಡಿಯಾ ಸಾಹಸ ಮಾಡಿ ಧ್ರುವ ಸರ್ಜಾ ಸೋತು ಸುಣ್ಣವಾಗಿದ್ದಾರೆ. ಉಪೇಂದ್ರ ಕೂಡ ಅಂತಹ ಪ್ರಯತ್ನ ಮಾಡೋಕೆ ಹಿಂದು ಮುಂದು ನೋಡ್ತಿದ್ದಾರೆ. 'ಬಿಲ್ಲ ರಂಗ ಬಾಷ' ಮೂಲಕ ಕಿಚ್ಚ ಸುದೀಪ್ ಅದೇ ಹಾದಿಯಲ್ಲಿದ್ದಾರೆ. ಇದೇ ಲೆಕ್ಕಾಚಾರದಲ್ಲಿ ಬಂದಿದ್ದ 'ವಿಕ್ರಾಂತ್ ರೋಣ' ನಿರಾಸೆ ಅನುಭವಿಸಿತ್ತು. ನೂರಾರು ಕೋಟಿ ಬಜೆಟ್ ಹಾಕಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಬಯಸುವ ಕಲಾವಿದರ ಕೊನೆ ಪಕ್ಷ ತಮ್ಮದೇ ಬಜೆಟ್‌ನಲ್ಲಿ ಸಿನಿಮಾ ಮಾಡಿ. ನಿರ್ಮಾಪಕರ ಹಣದಲ್ಲಿ ಆಟ ಆಡೋಕೆ ಹೋಗಬೇಡಿ.