ಸೈನ್ಸ್ ಫಿಕ್ಷನ್ ಸಿನಿಮಾಗಳಲ್ಲಿ ಈಗಾಗಲೇ ನಾವು ರೋಬೊಗಳನ್ನು ನೋಡಿದ್ದೇವೆ. ಕನ್ನಡದ ಹಾಲಿವುಡ್ ಹಾಗೂ 'ಎಂದಿರನ್' ಸರಣಿ ಸಿನಿಮಾಗಳಲ್ಲಿ ಇದನ್ನು ಮತ್ತಷ್ಟು ರೋಚಕವಾಗಿ ತೋರಿಸಿದ್ದರು. ಸಾಮಾನ್ಯವಾಗಿ ಕಂಪ್ಯೂಟರ್ ಗ್ರಾಫಿಕ್ಸ್ (CGI) ಅಥವಾ ರೋಬೋಟ್ ವೇಷ ಧರಿಸಿರುವ ಕಲಾವಿದರು ರೋಬೊ ಅವತಾರದಲ್ಲಿ ನಟಿಸುತ್ತಿದ್ದರು. ಉಪೇಂದ್ರ, ರಜನಿಕಾಂತ್ ಅದೇ ರೀತಿ ಜಾದೂ ಮಾಡಿದ್ದರು. ಆದರೆ ಈಗ ಕನ್ನಡ ಚಿತ್ರವೊಂದರಲ್ಲಿ ನಿಜವಾದ ರೋಬೊ ನಟಿಸ್ತಿದೆ.
ಸಿಂಪಲ್ ಸುನಿ ನಿರ್ದೇಶನದ 'ಲಂಬೋದರ 2.0' ಚಿತ್ರ ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಬರೆಯಲು ಮುಂದಾಗಿದೆ. ದೇಶದಲ್ಲೇ ಮೊದಲ ಬಾರಿಗೆ ನೈಜ ಹ್ಯೂಮನಾಯ್ಡ್ ರೋಬೋಟ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಬೆಂಗಳೂರು ಮೂಲದ ಖ್ಯಾತ 'ಮಚಾನಿ ರೋಬೋಟಿಕ್ಸ್' (Machani Robotics) ಸಂಸ್ಥೆ 'ಜಿಯಾ' (JIA) ಎಂಬ ಸುಧಾರಿತ ಹ್ಯೂಮನಾಯ್ಡ್ ರೋಬೋಟ್ ಅಭಿವೃದ್ಧಿಪಡಿಸಿದೆ. ಜಿಯಾ ಸ್ವತಃ ತಂತ್ರಜ್ಞಾನ ಆಧಾರಿತ ಕಲಾವಿದೆಯಾಗಿ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.
ಸೈನ್ಸ್-ಫಿಕ್ಷನ್ ಹಾಗೂ ಸೋಶಿಯಲ್ ಥ್ರಿಲ್ಲರ್ ಜಾನರ್ 'ಲಂಬೋದರ 2.0' ಚಿತ್ರದಲ್ಲಿ ಅನಿಲ್ ಶೆಟ್ಟಿ ಹೀರೊ ಆಗಿ ನಟಿಸಿದ್ದಾರೆ. ಸಾಚಿ ಬಿಂದ್ರಾ ಚಿತ್ರದ ನಾಯಕಿ. ಬಾಲಿವುಡ್ ನಟ ಕುನಾಲ್ ಕಪೂರ್ 'ಲಂಬೋದರ 2.0' ಚಿತ್ರದ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಡಿಜಿಟಲ್ ಜಮಾನದಲ್ಲಿ ಇಂದಿನ ಯುವಜನರ ಬದುಕು ಮತ್ತು ಸೋಶಿಯಲ್ ಪ್ರಭಾವದಿಂದ ಎದುರಾಗುತ್ತಿರುವ ಸಂಕೀರ್ಣತೆಗಳೇ ಈ ಚಿತ್ರದ ಕಥಾಹಂದರ. ಕೃತಕ ಬುದ್ಧಿಮತ್ತೆ (AI) ಈಗ ಹೊಸ ಕ್ರಾಂತಿ ಮಾಡ್ತಿದೆ. ಇಂತಹ ಕಾಲಘಟ್ಟದಲ್ಲಿ ಬೆಂಗಳೂರಿನ ಯುವಕನೊಬ್ಬನ ಜೀವನದ ಮೂಲಕ ನಿಜ ಜಗತ್ತು ಮತ್ತು ಡಿಜಿಟಲ್ ಜಗತ್ತಿನ ನಡುವಿನ ಸಂಘರ್ಷ ಹೇಗಿರುತ್ತೆ ಎನ್ನುವುದನ್ನು ಚಿತ್ರದಲ್ಲಿ ಹೇಳಲಾಗ್ತಿದೆ.
ನಮ್ಮ ವಾಸ್ತವ ಪ್ರಪಂಚವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುವ ಕಥೆ ಈ ಚಿತ್ರದಲ್ಲಿದೆ. ತಂತ್ರಜ್ಞಾನ ನಮ್ಮ ಭಾವನೆಗಳು ಹಾಗೂ ನಿರ್ಧಾರಗಳನ್ನು ಹೇಗೆ ಪ್ರಭಾವಿಸುತ್ತದೆ ಎನ್ನುವುದನ್ನು 'ಲಂಬೋದರ 2.0' ಚಿತ್ರದಲ್ಲಿ ಎಳೆಎಳೆಯಾಗಿ ತೆರೆದಿಡುವ ಪ್ರಯತ್ನ ನಡೀತಿದೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.