ಕನ್ನಡ ಚಿತ್ರರಂಗದ ಪೋಷಕ ನಟಿ ಲಲಿತಮ್ಮ ಇಂದು(ಅಕ್ಟೋಬರ್ 4)ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. 65 ವರ್ಷ ವಯಸ್ಸಿನ ಅವರಿಗೆ ಎರಡು ವರ್ಷಗಳ ಹಿಂದೆ ಸ್ಟ್ರೋಕ್ ಆಗಿತ್ತು. ಚಿಕಿತ್ಸೆಗೆ ಹಣ ಇಲ್ಲದೇ ಪರದಾಡುವಂತಾಗಿತ್ತು.

ನೆಗೆಟಿವ್ ಪಾತ್ರಗಳಲ್ಲಿ ಲಲಿತಮ್ಮ ನಟಿಸಿದ್ದೇ ಹೆಚ್ಚು. ಸಿನಿಮಾ ಮಾತ್ರವಲ್ಲದೇ ಕೆಲ ನಾಟಕಗಳಲ್ಲಿ, ಧಾರಾವಾಹಿಗಳಲ್ಲಿ ಕೂಡ ಅವರು ಬಣ್ಣ ಹಚ್ಚಿದ್ದರು. ಪುನೀತ್ ರಾಜ್‌ಕುಮಾರ್ ನಟನೆಯ 'ಜಾಕಿ', ದರ್ಶನ್ ನಟನೆಯ 'ಸುಂಟರಗಾಳಿ' ಚಿತ್ರಗಳಲ್ಲಿ ಕೂಡ ಮಿಂಚಿದ್ದರು. 'ಲೈಫು ಇಷ್ಟೇನೆ', 'ಜಂಗ್ಲಿ', 'ಭಜರಂಗಿ', 'ವಜ್ರಕಾಯ' ಸೇರಿ ನೂರಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಸರಿಯಾದ ಚಿಕಿತ್ಸೆ, ಕುಟುಂಬಸ್ಥರ ನೆರವು ಇಲ್ಲದೇ 'ಅಮ್ಮನ ಮಡಿಲು' ಆಶ್ರಮದಲ್ಲಿ ಅವರು ಸೇರುವಂತಾಗಿತ್ತು.

ಮದುವೆಯಾಗದೇ ಒಂಟಿಯಾಗಿಯೇ ಲಲಿತಮ್ಮ ಜೀವನ ಕಳೆದುಬಿಟ್ಟಿದ್ದರು. ಕಾಲೇಜು ದಿನಗಳಲ್ಲೇ ತಮ್ಮ ಶಿಕ್ಷಕರನ್ನು ಲಲಿತಾ ಅನುಕರಣೆ ಮಾಡುತ್ತಿದ್ದರು. ಆಕೆಯ ಪ್ರತಭೆ ನೋಡಿ ನಾಗೇಂದ್ರ ಶಾ ಧಾರಾವಾಹಿಯಲ್ಲಿ ನಟಿಸೋ ಅವಕಾಶ ಕೊಟ್ಟಿದ್ದರು. ಟಿ. ಎಸ್ ನಾಗಾಭರಣ ನಿರ್ದೇಶನದ ಧಾರಾವಾಹಿಗಳಲ್ಲಿ ಮಿಂಚಿದ್ದರು. 'ರಂಗೋಲಿ' ಧಾರಾವಾಹಿಯ ಖಳನಾಯಕಿ ಸರೋಜಾ ಪಾತ್ರ ಒಳ್ಳೆ ಹೆಸರು ತಂದುಕೊಟ್ಟಿತ್ತು.

'ಮಾಂಗಲ್ಯ' ಧಾರಾವಾಹಿಯ ಹಾಸ್ಯ ಪಾತ್ರವೂ ಲಲಿತಮ್ಮ ಜನರಿಗೆ ಹತ್ತಿರವಾಗುವಂತೆ ಮಾಡಿತ್ತು. 80ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದರು. 'ಗೌಡ್ರ ಗದ್ದಲ' ನಾಟಕದಲ್ಲಿ ಪುರುಷನ ಪಾತ್ರ ಮಾಡಿದ್ದು ಇದೆ. ದುನಿಯಾ ಸೂರಿ ಪರಿಚಯವಾಗಿ 'ಸುಂಟರಗಾಳಿ' ಸಿನಿಮಾ ಅವಕಾಶ ಸಿಕ್ಕಿತ್ತು. ಯಾರಿಗೂ ಸಹಾಯ ಮಾಡಲು ಹೋಗಿ ಕೈಯಲ್ಲಿದ್ದ ಹಣ ಎಲ್ಲಾ ಕಳೆದುಕೊಂಡು ಲಲಿತಮ್ಮ ಸಂಕಷ್ಟ ಎದುರಿಸುವಂತಾಯಿತು.