ವಿಮಾನ ಪ್ರಯಾಣ ಎನ್ನುವುದು ಈಗ ಸರ್ವೇಸಾಮಾನ್ಯ ಎನ್ನುವಂತಾಗಿದೆ. ಅದರಲ್ಲೂ ಉಳ್ಳವರು ಪದೇ ಪದೆ ವಿಮಾನ ಏರಿ ಇಳಿಯುತ್ತಾರೆ. ಸ್ಟಾರ್ ನಟರನ್ನು ಫ್ಲೈಟ್ ಟಿಕೆಟ್ ಬುಕ್ ಮಾಡಿ ನಿರ್ಮಾಪಕರು ಚಿತ್ರೀಕರಣಕ್ಕೆ ಕರೆಸುತ್ತಾರೆ. ಒಂದು ಸಲ ಹೆಸರು ಮಾಡಿಬಿಟ್ರೆ ಸಾಕು. ವಿಮಾನ ಪ್ರಯಾಣ ದೊಡ್ಡ ವಿಷಯವೇ ಅಲ್ಲ ಎನ್ನುವಂತಾಗಿಬಿಡುತ್ತದೆ
ಕನ್ನಡದ ಖ್ಯಾತ ಖಳನಟ ಈಗ ಪರಭಾಷೆಯಲ್ಲಿ ಕೂಡ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖಳನಟನಾಗಿ ಅಥವಾ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಇವರಿಗೆ ವಿಮಾನ ಅಂದ್ರೆ ಭಯ. ಈವರೆಗೆ ವಿಮಾನ ಹತ್ತಿಲ್ಲ. ಈ ವಿಚಾರ ಇದೀಗ ಬಹಿರಂಗವಾಗಿದೆ. ಅಂದಹಾಗೆ ಆ ನಟ ಮತ್ಯಾರು ಅಲ್ಲ, ಸಂಪತ್ ರಾಜ್
ಕನ್ನಡದಲ್ಲಿ 'ಜಾಕಿ', 'ಬೃಂದಾವನ' ಸೇರಿ ಒಂದಷ್ಟು ಸಿನಿಮಾಗಳಲ್ಲಿ ಸಂಪತ್ ರಾಜ್ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹುಬೇಡಿಕೆಯ ಪೋಷಕ ನಟನಾಗಿ ಅವರು ಗುರ್ತಿಸಿಕೊಂಡಿದ್ದಾರೆ. ಆದರೆ ನಿರ್ಮಾಪಕರು ಫ್ಲೈಟ್ ಟಿಕೆಟ್ ಬುಕ್ ಮಾಡಿದ್ರು, ಅವ್ರು ಮಾತ್ರ ಫ್ಲೈಟ್ ಏರುವುದಿಲ್ಲ. ಬದಲಿಗೆ ರೈಲಿನಲ್ಲಿ ಊರಿಂದ ಊರಿಗೆ ಪ್ರಯಾಣಿಸುತ್ತಾರೆ. ಈ ವಿಚಾರವನ್ನು ಖ್ಯಾತ ಛಾಯಾಗ್ರಾಹಕ ಚೋಟಾ ಕೆ ನಾಯ್ಡು ರಿವೀಲ್ ಮಾಡಿದ್ದಾರೆ. 'ಸಿಗ್ಮಾ' ಸಿನಿಮಾ ಈವೆಂಟ್‌ನಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.
ತಮಿಳುನಾಡು ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನದ 'ಸಿಗ್ಮಾ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಂಪತ್ ರಾಜ್ ಚಿತ್ರದಲ್ಲಿ ನಟಿಸಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಈವೆಂಟ್‌ನಲ್ಲಿ ಛಾಯಾಗ್ರಾಹಕ ಚೋಟಾ ಕೆ ನಾಯ್ಡು ಮಾತನಾಡಿದ್ದರು. ಈ ವೇಳೆ ಸಂಪತ್ ರಾಜ್ ಅವರಿಗೆ ವಿಮಾನ ಅಂದ್ರೆ ಭಯ. ಈವರೆಗೆ ವಿಮಾನ ಹತ್ತಿಲ್ಲ. ಎಷ್ಟು ದೂರ ಹೋಗಬೇಕಿದ್ರು ರೈಲಿನಲ್ಲಿ ಓಡಾಡುತ್ತಾರೆ ಎಂದು ಹೇಳಿರುವುದು ವೈರಲ್ ಆಗ್ತಿದೆ.