ತಮಿಳು ನಟ ಜಯಂ ರವಿ ಹಾಗೂ ಆರ್ತಿ ದಂಪತಿ ದೂರಗಲು ಬಯಸಿರುವುದು ಗೊತ್ತೇಯಿದೆ. ಇಬ್ಬರ ದಾಂಪತ್ಯ ಜೀವನ ಬೀದಿಗೆ ಬಂದು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದು ಗೊತ್ತೇಯಿದೆ. ರವಿ ಈಗಾಗಲೇ ಗಾಯಕಿ ಕೆನಿಶಾ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ.

ಸಾಮಾನ್ಯವಾಗಿ ಪತಿ ನನಗೆ ಕಿರುಕುಳ ಕೊಡುತ್ತಿದ್ದಾನೆ, ನನಗೆ ಡಿವೋರ್ಸ್ ಬೇಕು ಎಂದು ಕೇಳುವವರ ಸಂಖ್ಯೆ ದೊಡ್ಡದಿದೆ. ಆದರೆ ಈ ಪ್ರಕರಣದಲ್ಲಿ ಅದು ಉಲ್ಟಾ ಆಗಿದೆ. ಪತ್ನಿ ಹಾಗೂ ಆಕೆಯ ಪೋಷಕರು ನನಗೆ ಕಿರುಕುಳ ಕೊಡುತ್ತಿದ್ದಾರೆ, ನನಗೆ ಡಿವೋರ್ಸ್ ಬೇಕು ಎಂದು ನಟ ಜಯಂ ರವಿ ಕೋರ್ಟ್ ಕದ ತಟ್ಟಿದ್ದರು. ಆದರೆ ಇವತ್ತಿಗೂ ಆರ್ತಿ ನನಗೆ ಡಿವೋರ್ಸ್ ಬೇಡ ಎಂದೇ ವಾದಿಸುತ್ತಿದ್ದಾರೆ.

ಜಯಂ ರವಿ ಸುದ್ದಿಗೋಷ್ಠಿ ನಡೆಸಿ ಪತ್ನಿ ವಿರುದ್ಧ ಹರಿಹಾಯ್ದಿದ್ದರು. ನಾನು ದೂರ ನೆಮ್ಮದಿಯಾಗಿ ಇರಲು ಆರ್ತಿ ಬಿಡ್ತಿಲ್ಲ ಎಂದು ಬೇಸರದಿಂದ ಕಿರುಚಾಡಿ ನೋವು ತೋಡಿಕೊಂಡಿದ್ದರು. ಬಹಳ ದಿನಗಳ ಬಳಿಕ ಪತಿಯ ಬಗ್ಗೆ ಆರ್ತಿ ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ. "ಸೂರ್ಯ, ಅಜಿತ್, ಕಮಲ್, ವಿಕ್ರಂಗಿಂತ ನನ್ನ ಜೀವನಕ್ಕೆ ಬಂದ ಒಬ್ಬ ನಟಿಸಿದ ನಟನೆ ಅದ್ಭುತ.. ಅದಕ್ಕೆ ಆಸ್ಕರ್ ಅವಾರ್ಡ್ ಕೂಡ ಕೊಡಬಹುದು" ಎಂದು ಅಣಕವಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗ್ತಿದೆ.

2009ರಲ್ಲಿ ರವಿ ಹಾಗೂ ಆರ್ತಿ ಮದುವೆ ನಡೆದಿತ್ತು. ಎರಡು ವರ್ಷಗಳ ಹಿಂದೆ ರವಿ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. 'ಜಯಂ' ಎಂಬ ಸಿನಿಮಾ ಮೂಲಕ ಅವರು ಜನಪ್ರಿಯರಾಗಿದ್ದರು. ಹಾಗಾಗಿ ಜಯಂ ರವಿ ಎಂದೇ ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಮಾಡಿಕೊಂಡಿದ್ದಾರೆ. ರವಿ ಹಾಗೂ ಪ್ರೇಯಸಿ ಕೆನಿಶಾ ಒಟ್ಟಿಗೆ ಸಿಗರೇಟ್ ಸೇದುತ್ತಿರುವ ಖಾಸಗಿ ವೀಡಿಯೋವೊಂದು ವೈರಲ್ ಆಗ್ತಿದೆ. ಇದೇ ಕಾರಣಕ್ಕೆ ಆರ್ತಿ ಹೀಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗ್ತಿದೆ.