ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸೀಕ್ವೆಲ್ ವಿಶ್ವದಾದ್ಯಂತ ತೆರೆಗಪ್ಪಳಿಸಿದೆ. ಬೆಳ್ಳಂಬೆಳಗ್ಗೆ 6 ಗಂಟೆಗೆ ಮೊದಲ ಪ್ರದರ್ಶನ ಶುರುವಾಗಿದ್ದು ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ನೆಲ್ಸನ್ ಹಾಗೂ ತಲೈವಾ ಕಾಂಬೊ ಈ ಬಾರಿ ವರ್ಕ್ ಆಗುತ್ತಾ ಎನ್ನುವ ನಿರೀಕ್ಷೆ ಇತ್ತು. ಅದಕ್ಕೆ ಈಗ ತೆರೆಗೆ ಬಿದ್ದಿದೆ.

ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ 'ಜೈಲರ್'-2 ಸಿನಿಮಾ ನಿರ್ಮಾಣವಾಗಿದೆ. ಮತ್ತೊಮ್ಮೆ ಮೋಹನ್ ಲಾಲ್ ಹಾಗೂ ಶಿವರಾಜ್‌ಕುಮಾರ್ ಅತಿಥಿ ಪಾತ್ರಗಳಲ್ಲಿ ತಲೈವಾಗೆ ಸಾಥ್ ಕೊಟ್ಟಿದ್ದಾರೆ. ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿತ್ತು. ಕರ್ನಾಟಕದಲ್ಲಿ ಮಾತ್ರ 'ಪ್ರೇಮದ ಊರಲಿ' ಸಿನಿಮಾ ಎದುರು ರಜನಿಕಾಂತ್ ಹವಾ ಅಷ್ಟಾಗಿ ಕಂಡುಬರ್ತಿಲ್ಲ. ಆದರೂ ಟಿಕೆಟ್ ದರ ಗಣನೀಯವಾಗಿ ಹೆಚ್ಚಾಗಿದೆ. ಈಗಾಗಲೇ ಸಿನಿಮಾ ನೋಡಿದವರು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಆವರೇಜ್ ಸಿನಿಮಾ

ಫಸ್ಟ್ ಹಾಫ್ ಚೆನ್ನಾಗಿದೆ. ಆದ್ರೆ ಸೆಕೆಂಡ್ ಹಾಫ್ ನೀರಸ ಅನುಭವ ನೀಡುವ ಮಾಮೂಲಿ ಕಮರ್ಷಿಯಲ್ ಸಿನಿಮಾ.. ಫಸ್ಟ್‌ ಹಾಫ್ ನೆಲ್ಸನ್ ಅವರ ಟ್ರೇಡ್‌ಮಾರ್ಕ್ ಕಾಮಿಡಿ ಹಾಗೂ ರಜನಿಕಾಂತ್ ಎಲಿವೇಷನ್ ಸೀನ್ಸ್ ಹಾಗೂ ಅನಿರುದ್ಧ್ ಬಿಜಿಎಂ ಕಾರಣಕ್ಕೆ ಮಜಾ ಕೊಡುತ್ತೆ. ಆದ್ರೆ ಬರವಣೆಗೆ ವೀಕ್ ಎನ್ನಬಹುದು. ಎಸ್‌ಜೆ ಸೂರ್ಯ ಮತ್ತು ವಿದ್ಯಾ ಬಾಲನ್ ಖಳನಾಯಕನ ಟ್ರ್ಯಾಕ್‌ನಲ್ಲಿ ಇಂಪ್ಯಾಕ್ಟ್ ಇಲ್ಲ. ರಜನಿಕಾಂತ್ ಸ್ಕ್ರೀನ್ ಪ್ರಸೆನ್ಸ್ ಚೆನ್ನಾಗಿದ್ರು ಎಲಿವೇಷನ್ ಸೀನ್ಸ್ ಹಿಟ್ ಆಗುವುದಿಲ್ಲ. ಅತಿಥಿ ಪಾತ್ರಗಳು ಹಿಂದಿನ ಸಿನಿಮಾದಷ್ಟು ಮಜಾ ಕೊಡಲ್ಲ, ಒಟ್ಟಾರೆ ಆವರೇಜ್ ಸಿನಿಮಾ ಎಂದು Venkyreviews ಪೇಜ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

ಜೈಲರ್ ಗೆದ್ರು

ಕ್ರಿಸ್ಟೋಫರ್ ಕನಕರಾಜ್ ಎಂಬುವವರು ಟ್ವೀಟ್ ಮಾಡಿ "ಫಸ್ಟ್ ಹಾಫ್ ಚಿಂದಿ..ಸೂಪರ್‌ಸ್ಟಾರ್ ಟೈಟಲ್ ಕಾರ್ಡ್, ನೆಲ್ಸನ್ ಕಾಮಿಡಿ ಸೀನ್ಸ್, ಮಾಸ್ ಬ್ರಿಡ್ಜ್ ಸೀಕ್ವೆನ್ಸ್ ಹಾಗೂ ಟೀ ಸ್ಟಾಲ್ ದೃಶ್ಯ, ಇಂಟರ್‌ವಲ್ ಬೊಂಬಾಟಾಗಿದ್ದು ಎಂಗೇಜಿಂಗ್ ಆಗಿದೆ. ಮಜವಾದ ಫಸ್ಟ್ ಹಾಫ್, ಸ್ವಲ್ಪ ಕಮ್ಮಿ ಎನಿಸುವ ಸೆಕೆಂಡ್ ಹಾಫ್.. ಒಟ್ಟಾರ್ ಜೈಲರ್ ಗೆದ್ದುಬಿಟ್ರು" ಬರೆದುಕೊಂಡಿದ್ದಾರೆ.

ಪಕ್ಕಾ ಮಾಸ್ ಮಸಾಲ

ಇದು ಟೈಗರ್ ಮುತ್ತುವೇಲ್ ಪಾಂಡಿಯನ್ ಪುನರಾಗಮನ..ಸೂಪರ್ ಸ್ಟಾರ್‌ಗಳ ಆರ್ಭಟ. ರಜನಿಕಾಂತ್ ಸ್ಕ್ರೀನ್‌ಪ್ರಸೆನ್ಸ್ ಸಖತ್ತಾಗಿದೆ. ದೊಡ್ಡ ಸ್ಟಾರ್‌ಗಳನ್ನು ಚೆನ್ನಾಗಿ ನಿಭಾಯಿಸಬಲ್ಲೆ ಎಂದು ನೆಲ್ಸನ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಚಿತ್ರಮಂದಿರದಿಂದ ಹೊರಬಂದ ಬಳಿಕ ಕೂಡ ಎಲಿವೇಷನ್ ಸೀನ್ಸ್ ಮನಸ್ಸಿನಲ್ಲಿ ಉಳಿಯುತ್ತದೆ. ಕಾಮಿಡಿ ವರ್ಕ್ ಆಗಿದೆ. ಅನಿರುದ್ಧ್ ಸಂಗೀತ ಚಿತ್ರಕ್ಕೆ ದೊಡ್ಡ ಬಲ ತುಂಬಿದೆ. ಟೀ ಸ್ಟಾಲ್ ದೃಶ್ಯ ಮತ್ತು ರಜನಿಕಾಂತ್ - ರಮ್ಯಾಕೃಷ್ಣನ್ - ಸೂರ್ಯ ಕಾಂಬೊ ದೃಶ್ಯಗಳು ನನಗೆ ಇಷ್ಟವಾಯ್ತು. ಒಟ್ಟಾರೆ ಪಕ್ಕಾ ಮಾಸ್ ಮಸಾಲ ಸಿನಿಮಾ ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.

ಇಂಡಸ್ಟ್ರಿ ಹಿಟ್

ಬ್ಲಾಕ್‌ಬಸ್ಟರ್..ಮಾಸ್ ಕಮರ್ಷಿಯಲ್ ಫಸ್ಟ್‌ಹಾಫ್.. ಅದೇ ಟೆಂಪ್ಲೇಟ್, ಆದ್ರೆ ನೆಲ್ಸನ್ ಕಾಮಿಡಿ, ರಜನಿಕಾಂತ್ ಸ್ಕ್ರೀನ್‌ ಪ್ರಸೆನ್ಸ್ ನಿಜವಾದ ಮ್ಯಾಜಿಕ್ ಮಾಡಿದೆ.. ಚಿಂದಿ ಇಂಟರ್‌ವಲ್.. ಅನಿರುದ್ಧ್ ಯಾವಾಗಲೂ ಅದ್ಭುತ.. ಒಟ್ಟಾರೆ ಇಂಡಸ್ಟ್ರಿ ಹಿಟ್ ಆಗುತ್ತದೆ ಎಂದು ಜಯಪ್ರಕಾಶ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಜೈಲರ್ ವಿನ್ನರ್

ಅತ್ಯುತ್ತಮ ಫಸ್ಟ್‌ ಹಾಫ್. ಓಕೆ ಓಕೆ ಸೆಕೆಂಡ್ ಹಾಫ್. ಪಾರ್ಟಿ ದೃಶ್ಯ, ಬಾಷಾ ದೃಶ್ಯ, ವಿಶೇಷ ಕ್ಯಾಮಿಯೋ, ಕ್ಲೈಮ್ಯಾಕ್ಸ್ ಮಾಸ್ ದೃಶ್ಯ, ಪಾರ್ಟ್‌-3ಗೆ ಕೊಟ್ಟಿರುವ ಸುಳಿವು ಸಖತ್ತಾಗಿದೆ. ನೆಲ್ಸನ್ ಪ್ರೇಕ್ಷಕರಿಗೆ ಬೇಕಾದ ಮನರಂಜನೆ ನೀಡಿದ್ದಾರೆ ಎನ್ನುವುದು ಲಕ್ಷ್ಮಿಕಾಂತ್ ಎಂಬುವವರ ಅಭಿಪ್ರಾಯ.