ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಪರಭಾಷಾ ಸಿನಿಮಾಗಳ ಹಗಲು ದರೋಡೆ ಮುಂದುವರೆದಿದೆ. ನಗರದಲ್ಲಿ 'ಜೈಲರ್-2' ಟಿಕೆಟ್ ದರ 1000 ರೂ. ದಾಟಿದೆ. ಸಿಂಗಲ್ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6ಗಂಟೆಗೆ ಶೋಗೆ 800 ರೂ. ಹಾಗೂ 1000 ರೂ. ಟಿಕೆಟ್ ದರ ನಿಗದಿಯಾಗಿದೆ. ಆದರೆ ಮಲ್ಟಿಪ್ಲೆಕ್ಸ್ಗಳಲ್ಲಿ ಇನ್ನು ನಾಲ್ಕೈದು ದಿನ ಟಿಕೆಟ್ ದರ ಕಮ್ಮಿ ಆಗುವ ಸುಳಿವು ಸಿಕ್ತಿಲ್ಲ.
'ಪ್ರೇಮದ ಊರಲಿ' ಆರ್ಭಟದ ನಡುವೆಯೂ 'ಜೈಲರ್-2' ಚಿತ್ರಕ್ಕೆ ಹೆಚ್ಚು ಶೋಗಳು ರಾಜ್ಯದಲ್ಲಿ ಸಿಕ್ಕಿದೆ. ರಜನಿಕಾಂತ್ ಜೊತೆಗೆ ಶಿವರಾಜ್ಕುಮಾರ್ ಹಾಗೂ ಮೋಹನ್ ಲಾಲ್ ಸಹ ನಟಿಸಿರುವುದು ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಆದರೆ 'ಪ್ರೇಮದ ಊರಲಿ' ಚಿತ್ರದ ಎಫೆಕ್ಟ್ ಎದ್ದು ಕಾಣ್ತಿದೆ. ಆದರೂ ಥಿಯೇಟರ್ ಮಾಲೀಕರು 'ಜೈಲರ್-2' ಚಿತ್ರಕ್ಕೆ ಆದ್ಯತೆ ಕೊಡುತ್ತಿದ್ದಾರೆ. ಇನ್ನು ಟಿಕೆಟ್ ದರದ ವಿಚಾರಕ್ಕೆ ಬಂದರೆ ತಮಿಳುನಾಡಿಗಿಂತಲೂ ಕರ್ನಾಟಕದಲ್ಲಿ ಹೆಚ್ಚಿದೆ.
ರಾಜ್ಯದಲ್ಲಿ ಹೆಚ್ಚು
ಮೊದಲ ದಿನ (ಅಕ್ಟೋಬರ್ 15) 'ಜೈಲರ್-2' ಟಿಕೆಟ್ ದರ ಬೆಂಗಳೂರಿನಲ್ಲಿ ಗಣನೀಯವಾಗಿ ಹೆಚ್ಚಿರುವುದು ಗೊತ್ತಾಗ್ತಿದೆ. ಅರೇ, ತಮಿಳು ಚಿತ್ರಕ್ಕೆ ಚೆನ್ನೈನಲ್ಲೇ ಇಲ್ಲದಷ್ಟು ದರ ಕೊಟ್ಟು ಬೆಂಗಳೂರಿನಲ್ಲಿ ನೋಡುವಂತಾಗಿದೆ. ರಾಜ್ಯದಲ್ಲಿ ಏಕರೂಪ ಟಿಕೆಟ್ ದರ ನಿಗದಿಗೆ ಕಳೆದ ವರ್ಷ ಸರ್ಕಾರ ಯತ್ನಿಸಿತ್ತು. ಆದರೆ ನಮ್ಮವರೇ ಇದಕ್ಕೆ ಬ್ರೇಕ್ ಹಾಕಿದ್ದರು. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕೂಡ ಇದಕ್ಕೆ ಕೈಜೋಡಿಸಿತ್ತು. ಹಾಗಾಗಿ ಆ ಪ್ರಯತ್ನ ವಿಫಲವಾಗಿತ್ತು.
ಸರಾಸರಿ ಟಿಕೆಟ್ ದರ
ಬೆಂಗಳೂರಿನಲ್ಲಿ ಅಕ್ಟೋಬರ್ 15ರಂದು 'ಜೈಲರ್-2' ಚಿತ್ರದ ಸರಾಸರಿ ಟಿಕೆಟ್ ದರ 587 ರೂ. ಇದೆ. ಹೈದರಾಬಾದ್ನಲ್ಲಿ 224 ರೂ. ಹಾಗೂ ಚೆನ್ನೈನಲ್ಲಿ ಕೇವಲ 179 ರೂ. ಅಷ್ಟಿದೆ. ಚೆನ್ನೈನ ಮಲ್ಟಿಪ್ಲೆಕ್ಸ್ನಲ್ಲಿ ಕೂಡ ಟಿಕೆಟ್ ದರ 300 ರೂ ಮೀರಿಲ್ಲ. ನಿಜಕ್ಕೂ ಇದು ವಿಪರ್ಯಾಸವೇ ಸರಿ. ಮೊದಲ ದಿನವೇ ಸಿನಿಮಾ ನೋಡಬೇಕು ಎನ್ನುವ ಅಭಿಮಾನಿಗಳ ಉತ್ಸಾಹವನ್ನು ಎನ್ಕ್ಯಾಶ್ ಮಾಡಿಕೊಂಡು ದರೋಡೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಯಾವಾಗ ಬ್ರೇಕ್ ಬೀಳುತ್ತೋ ಕಾದು ನೋಡಬೇಕು.