ರಜನಿಕಾಂತ್ ನಟನೆಯ 'ಜೈಲರ್- 2' ಸಿನಿಮಾ ಬಿಡುಗಡೆಗೆ ಇನ್ನೆರಡು ದಿನ ಬಾಕಿಯಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಅಭಿಮಾನಿಗಳು ಟಿಕೆಟ್ ಬುಕ್ ಮಾಡಲು ಮುಗಿಬಿದ್ದಿದ್ದಾರೆ. ಇಷ್ಟು ಬೇಗ 30 ಕೋಟಿ ರೂ. ಅಧಿಕ ಕಲೆಕ್ಷನ್ ಆಗಿದೆ. ಆದರೆ ಮೊದಲ ದಿನ ಚಿತ್ರ ದೊಡ್ಡಮಟ್ಟದಲ್ಲಿ ಓಪನಿಂಗ್ ಪಡೆಯುವುದು ಕಷ್ಟ ಕಷ್ಟ ಎನ್ನುವಂತಾಗಿದೆ.

ಅದ್ಯಾಕೋ 'ಜೈಲರ್- 2' ಸಿನಿಮಾ ಹೈಪ್ ಕಮ್ಮಿಯಿದೆ. ಸೂಪರ್ ಹಿಟ್ ಸಿನಿಮಾ ಸೀಕ್ವೆಲ್ ಆಗಿದ್ದರೂ ರಜನಿಕಾಂತ್ ಜೊತೆಗೆ ಮೋಹನ್ ಲಾಲ್, ಶಿವಣ್ಣ, ಹೃತಿಕ್ ರೋಷನ್ ಗೆಸ್ಟ್ ಅಪ್ಪಿಯರೆನ್ಸ್ ಎಲ್ಲವೂ ಇದ್ದು ಕ್ರೇಜ್ ಮಾಡಿ ನಿರೀಕ್ಷಿತ ಮಟ್ಟದಲ್ಲಿ ಕಾಣ್ತಿಲ್ಲ. ಟ್ರೈಲರ್ ಒಂದು ಹಂತಕ್ಕೆ ಹಿಟ್ ಎನಿಸಿಕೊಂಡರೂ ಸಾಂಗ್ಸ್ ನಿರಾಸೆ ಮೂಡಿಸಿದ್ದೇ ಇದಕ್ಕೆ ಕಾರಣ ಎನ್ನಲಾಗ್ತಿದೆ.

'ಜೈಲರ್' ಚಿತ್ರದಲ್ಲಿ ತಮನ್ನಾ ಹೆಜ್ಜೆ ಹಾಕಿದ್ದ 'ನೂ ಕಾವಾಲಯ್ಯ' ಸಾಂಗ್ ಹಿಟ್ ಆಗಿ ಗಮನ ಸೆಳೆದಿತ್ತು. ಆ ಚಿತ್ರಕ್ಕೂ ಭಾರೀ ಓಪನಿಂಗ್ ಸಿಕ್ಕಿರಲಿಲ್ಲ. ಆದರೆ ಬಿಡುಗಡೆ ಬಳಿಕ ನೋಡ ನೋಡುತ್ತಲೇ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಎನಿಸಿಕೊಂಡಿತ್ತು. ಸೀಕ್ವೆಲ್ ಕೂಡ ಅದೇ ಮ್ಯಾಜಿಕ್ ಮಾಡುವ ಲೆಕ್ಕಾಚಾರ ಶುರುವಾಗಿದೆ.

'ಟಾಕ್ಸಿಕ್' ಮೀರಿಸಲ್ವಾ?

ಈ ವರ್ಷ ದೊಡ್ಡ ಓಪನಿಂಗ್ ಪಡೆದುಕೊಂಡ ಸಿನಿಮಾಗಳ ಲಿಸ್ಟ್‌ನಲ್ಲಿ 'ಧುರಂಧರ್-2' ಮೊದಲ ಸ್ಥಾನದಲ್ಲಿದೆ. ಅಡ್ವಾನ್ಸ್ ಬುಕ್ಕಿಂಗ್, ಡೇ ವನ್ ಕಲೆಕ್ಷನ್ ಸೇರಿ ಸಿನಿಮಾ ವಿಶ್ವದಾದ್ಯಂತ 190 ಕೋಟಿ ರೂ. ಕೊಳ್ಳೆ ಹೊಡೆದಿತ್ತು. ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಒಟ್ಟಾರೆ ಫಲಿತಾಂಶ ಏನೇ ಆಗಿದ್ದರೂ 135 ಕೋಟಿ ರೂ. ಬಾಚಿ ಆರಂಭದಲ್ಲೇ ಅಬ್ಬರಿಸಿತ್ತು. ಸದ್ಯ 'ಜೈಲರ್'-2 ಸಿನಿಮಾ 100 ಕೋಟಿ ರೂ. ಓಪನಿಂಗ್ಸ್ ಪಡೆಯುವುದು ಅನುಮಾನ ಎನ್ನಲಾಗ್ತಿದೆ.

ತಮಿಳುನಾಡಿನಲ್ಲೇ ಹಿನ್ನಡೆ

ಹೇಳಿಕೇಳಿ ಇದು ತಮಿಳು ಸಿನಿಮಾ. ಆದರೆ ತಮಿಳುನಾಡಿನಲ್ಲೇ ಅಡ್ವಾನ್ಸ್ ಬುಕ್ಕಿಂಗ್ ಹೇಳಿಕೊಳ್ಳುವಂತಿಲ್ಲ. ಟಿಕೆಟ್ ದರ ಕಮ್ಮಿ ಇದ್ದರೂ ಜನ ಹಿಂದೇಟು ಹಾಕುತ್ತಿದ್ದಾರೆ. ಆದರೆ ಕರ್ನಾಟಕ ಹಾಗೂ ಕೇರಳದಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಚೆನ್ನಾಗಿದೆ. ಗುರುವಾರ ಬೆಳಗ್ಗೆ 6 ಗಂಟೆ ಫ್ಯಾನ್ಸ್ ಶೋ ಬುಕ್ಕಿಂಗ್ ಓಪನ್ ಆಗಿದೆ. ಟಿಕೆಟ್ ದರ 800 ರೂ. ದಾಟಿದೆ. ಆದರೂ ಈಗಾಗಲೇ ರಾಜ್ಯದಲ್ಲಿ 2 ಕೋಟಿ ರೂ. ಕಲೆಕ್ಷನ್ ಆಗಿದೆ.