ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್'- 2 ಸಿನಿಮಾ ಸಖತ್ ಸದ್ದು ಮಾಡ್ತಿದೆ. ಚಿತ್ರದ ಬಗ್ಗೆ ಒಳ್ಳೆ ರಿಪೋರ್ಟ್ ಬಂದಿದ್ದು ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಕ್ಕಿದೆ. ಆದರೆ ಅಡ್ವಾನ್ಸ್ ಬುಕ್ಕಿಂಗ್ ಕಮ್ಮಿ ಆಗಿ ಮೊದಲ ದಿನ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ಮಾಡಿಲ್ಲ. ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಓಪನಿಂಗ್ ಕಲೆಕ್ಷನ್ಗಿಂತ ತಲೈವಾ ಸಿನಿಮಾ ಹಿಂದೆ ಉಳಿದಿದೆ.
ಯಶ್ ನಟನೆಯ 'ಟಾಕ್ಸಿಕ್' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕರೂ ಫಸ್ಟ್ ವೀಕೆಂಡ್ ಗಳಿಕೆ ಚೆನ್ನಾಗಿತ್ತು. ಮುಖ್ಯವಾಗಿ ಅಡ್ವಾನ್ಸ್ ಬುಕ್ಕಿಂಗ್ ಹಾಗೂ ಮೊದಲ ದಿನ ಗಳಿಕೆ ಭರ್ಜರಿಯಾಗಿತ್ತು. ಬಳಿಕ ಸಿನಿಮಾ ಬಾಕ್ಸಾಫೀಸ್ನಲ್ಲಿ ಕುಂಟಲು ಆರಂಭಿಸಿತ್ತು. ರಜನಿಕಾಂತ್ ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಕ್ಕಿದೆ. ಆದರೆ ಸೂಪರ್ ಸ್ಟಾರ್ ಕ್ರೇಜ್, ಶಿವಣ್ಣ, ಮೋಹನ್ ಲಾಲ್ ಹಾಗೂ ಹೃತಿಕ್ ಗೆಸ್ಟ್ ಅಪಿಯರೆನ್ಸ್ ಎಲ್ಲಾ ಸೇರಿಸಿಕೊಂಡ್ರೆ ಇದು ಕಮ್ಮಿ ಎನ್ನಬಹುದು.
ಫಸ್ಟ್ ಡೇ ಕಲೆಕ್ಷನ್
'ಜೈಲರ್'- 2 ಚಿತ್ರ ಮೊದಲ ದಿನ ಭಾರತದಲ್ಲಿ 59.70 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ. ಗ್ರಾಸ್ 70.25 ಕೋಟಿ ರೂ. ಎನ್ನಲಾಗ್ತಿದೆ. ಇನ್ನು ವಿದೇಶಗಳಲ್ಲಿ 55 ಕೋಟಿ ರೂ. ಗ್ರಾಸ್ ಸೇರಿ 125.25 ರೂ. ಮೊದಲ ದಿನ ಕೊಳ್ಳೆ ಹೊಡೆದಂತಾಗಿದೆ. ಉತ್ತರಭಾರತದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಸದ್ದು ಮಾಡ್ತಿಲ್ಲ ಅದೇ ದೊಡ್ಡ ಹಿನ್ನಡೆ ಎನಿಸಿಕೊಂಡಿದೆ.
'ಟಾಕ್ಸಿಕ್' ಎದುರು ಡಲ್
ಆಗಸ್ಟ್ 26ರಂದು 'ಟಾಕ್ಸಿಕ್' ಸಿನಿಮಾ ತೆರೆಗಪ್ಪಳಿಸಿತ್ತು. sacnilk ವರದಿ ಪ್ರಕಾರ ಯಶ್ ನಟನೆಯ ಸಿನಿಮಾ ಮೊದಲ ದಿನ ಭಾರತದಲ್ಲಿ 101 ಕೋಟಿ ನೆಟ್ ಕಲೆಕ್ಷನ್ ಜೊತೆಗೆ 120 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಅದೇ ರೀತಿ ವಿದೇಶಗಳಲ್ಲಿ 16 ಕೋಟಿ ಸೇರಿ ಒಟ್ಟು 137 ಕೋಟಿ ರೂ. ಗಳಿಸಿದ್ದಾಗಿ ಹೇಳಲಾಗಿತ್ತು. 'ಜೈಲರ್'- 2 ವಿದೇಶಗಳಲ್ಲಿ ದೊಡ್ಡಮಟ್ಟದಲ್ಲಿ ಕಲೆಕ್ಷನ್ ಮಾಡಿದೆ.
ಫ್ಯಾನ್ಸ್ ಖುಷ್
ಕಲೆಕ್ಷನ್ ಏನೇ ಇದ್ದರೂ 'ಜೈಲರ್'- 2 ಸಿನಿಮಾ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ನೆಲ್ಸನ್ ಮತ್ತೊಮ್ಮೆ ಗೆದ್ದಿದ್ದಾರೆ. ಸೆಕೆಂಡ್ ಹಾಫ್ ಕೊಂಚ ನಿರಾಸೆ ಮೂಡಿಸಿದರೂ ಒಟ್ಟಾರೆ ಸಿನಿಮಾ ಸೂಪರ್ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. 'ಜೈಲರ್' ಚಿತ್ರದ ಓಪನಿಂಗ್ ಕೂಡ ಕಮ್ಮಿ ಇತ್ತು. ಆದರೆ ನಿಧಾನವಾಗಿ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಅದೇ ಮ್ಯಾಜಿಕ್ ಸೀಕ್ವೆಲ್ ಕೂಡ ಮಾಡುವಂತೆ ಕಾಣ್ತಿದೆ.