ಮನೋಜ್ ಕುಮಾರ್ ನಿರ್ದೇಶನದ 'ಪ್ರೇಮದ ಊರಲಿ' ಸಿನಿಮಾ 100 ಕೋಟಿ ರೂ. ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿದೆ. ಸಣ್ಣ ಬಜೆಟ್ ಸಿನಿಮಾವೊಂದು ಇಂತಹ ಮ್ಯಾಜಿಕ್ ಮಾಡಬಹುದು ಎನ್ನುವ ಯಾವುದೇ ನಿರೀಕ್ಷೆ ಇರಲಿಲ್ಲ. ಒಂದಷ್ಟು ಮೈನಸ್‌ ನಡುವೆಯೂ ಸಿನಿಮಾ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಎರಡನೇ ವಾರಕ್ಕೆ ಮೂರನೇ ವಾರ ಸಿನಿಮಾ ಕಲೆಕ್ಷನ್ ಹೆಚ್ಚಾಗಿದೆ.

ಕನ್ನಡ ಚಿತ್ರರಂಗದಲ್ಲಿ ಈವರೆಗೆ ಯಾವುದೇ ಸಿನಿಮಾ ಮಾಡದ ದಾಖಲೆಗಳನ್ನು 'ಪ್ರೇಮದ ಊರಲಿ' ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದೆ. ಈಗಾಗಲೇ 100 ಕೋಟಿ ಕ್ಲಬ್ ಸೇರಿ ಸಿನಿಮಾ ಗಮನ ಸೆಳೆದಿದೆ. ಸದ್ಯ 'ಟಾಕ್ಸಿಕ್' ಬಾಕ್ಸಾಫೀಸ್ ದಾಖಲೆಯನ್ನು ಕೂಡ ಹಿಂದಿಕ್ಕಿದೆ ಈ ಫೀಲ್ ಗುಡ್ ಸಿನಿಮಾ ಎಲ್ಲರ ಹುಬ್ಬೇರಿಸಿದೆ.

ಟಾಕ್ಸಿಕ್ ದಾಖಲೆ ಧೂಳ್

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದು ಗೊತ್ತೇಯಿದೆ. ಫಲಿತಾಂಶ ಏನೇ ಇದ್ದರೂ ಫಸ್ಟ್ ವೀಕೆಂಡ್ ಗಳಿಕೆ ಚೆನ್ನಾಗಿತ್ತು. ಬಹುತೇಕರು ಸಿನಿಮಾ ಚೆನ್ನಾಗಿಲ್ಲ ಎಂದು ಷರಾ ಬರೆದುಬಿಟ್ಟರು. ಆದರೆ ಒಂದಷ್ಟು ಜನ ಮಾತ್ರ ಅದ್ಭುತ ಸಿನಿಮಾ ಎಂದು ಹಾಡಿ ಕೊಂಡಾಡಿದ್ದರು. ಪದೇ ಪದೆ ನೋಡಿ ಎಂಜಾಯ್ ಮಾಡಿದ್ದರು. ಕರ್ನಾಟಕದಲ್ಲಿ ಸಿನಿಮಾ 80 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಸದ್ಯ 'ಪ್ರೇಮದ ಊರಲಿ' ಈ ದಾಖಲೆ ಮುರಿದು ಮುನ್ನುಗ್ಗುತ್ತಿದೆ. ಹೌದು ಈ ವರ್ಷ ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ 'ಪ್ರೇಮದ ಊರಲಿ' ಪಾತ್ರವಾಗಿದೆ.

3ನೇ ವಾರ ದಾಖಲೆ

ಸಾಮಾನ್ಯವಾಗಿ ಯಾವುದೇ ಸಿನಿಮಾ ಕಲೆಕ್ಷನ್ ಮೊದಲ ವಾರ ಹೆಚ್ಚಾಗಿ ಬಳಿಕ ನಿಧಾನವಾಗಿ ಕಮ್ಮಿ ಆಗುತ್ತಾ ಹೋಗುತ್ತೆ. ಕೆಲವೊಮ್ಮೆ ಮಾತ್ರ ಇದು ಉಲ್ಟಾ ಆಗುತ್ತೆ. 'ಪ್ರೇಮದ ಊರಲಿ' ಚಿತ್ರ ಇದೇ ರೀತಿ ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಿಸಿಕೊಂಡು ಬಂದಿತ್ತು. 23ನೇ ದಿನ ಕೂಡ ಒಂದು ಲಕ್ಷ ಜನ ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ ಮಾಡಿದ್ದರು. 24ನೇ ದಿನವಾದ ಇಂದು(ಅಕ್ಟೋಬರ್ 18) ಕೂಡ 2.5 ಕೋಟಿ ರೂ. ಅಡ್ವಾನ್ಸ್ ಬುಕ್ಕಿಂಗ್ ಆಗಿದೆ. ಅಂದ್ರೆ ಇವತ್ತು ಕೂಡ ಬಾಕ್ಸಾಫೀಸ್ ಶೇಕ್ ಆಗಲಿದೆ. ಇನ್ನು 3ನೇ ವಾರದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿರುವ ಕನ್ನಡ ಸಿನಿಮಾ ಎನ್ನುವ ದಾಖಲೆ ಬರೆದಿದೆ. ಮೊದಲ ದಿನ 10 ಲಕ್ಷ ಕಲೆಕ್ಷನ್ ಮಾಡಿದ್ದ ಸಿನಿಮಾ ಈಗ 100 ಕೋಟಿ ರೂ. ಕ್ಲಬ್ ಸೇರಿದೆ.

ಕರ್ನಾಟಕದಲ್ಲಿ 100 ಕೋಟಿ

ದೇಶವಿದೇಶಗಳಲ್ಲಿ 'ಪ್ರೇಮದ ಊರಲಿ' ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರನ್ನು ರಂಜಿಸ್ತಿದೆ. ತೆಲುಗಿಗೂ ಸಿನಿಮಾ ಡಬ್ ಆಗಿದೆ. ಒಟ್ಟಾರೆ ಕಲೆಕ್ಷನ್ 100 ಕೋಟಿ ರೂ. ಗಡಿದಾಟಿದೆ. ಆದರೆ ಕರ್ನಾಟಕದಲ್ಲಿ 97 ಕೋಟಿ ರೂ. ಬಾಚಿಕೊಂಡಿದೆ. ಇವತ್ತು ರಾಜ್ಯದಲ್ಲೇ 100 ಕೋಟಿ ರೂ. ಕಲೆಕ್ಷನ್ ಕ್ಲಬ್ ಸೇರುವುದು ಖಚಿತವಾಗಿದೆ.