ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್- 2' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ನೆಲ್ಸನ್ ನಿರ್ದೇಶನದ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ಹಾಗೂ ತಂತ್ರಜ್ಞರು ಕೆಲಸ ಮಾಡಿದ್ದಾರೆ. ನರಸಿಂಹ ಆಗಿ ಶಿವಣ್ಣ ಅಬ್ಬರಿಸಿರುವುದು ಮಾತ್ರವಲ್ಲ, ಚೇತನ್ ಡಿಸೋಜಾ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ.

ಕನ್ನಡದ ಖ್ಯಾತ ಸ್ಟಂಟ್ ಮಾಸ್ಟರ್ ಚೇತನ್ ಡಿಸೋಜಾ ಈಗ ಪರಭಾಷಾ ಸಿನಿಮಾಗಳಲ್ಲಿ ಕಮಾಲ್ ಮಾಡ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಕೆಲಸ ಮಾಡಿ ಭೇಷ್ ಎನಿಸಿಕೊಳ್ಳುತ್ತಿದ್ದಾರೆ. 'ಜೈಲರ್- 2' ಚಿತ್ರದ ಎಲ್ಲಾ ಆಕ್ಷನ್ ಸನ್ನಿವೇಶಗಳನ್ನು ಚೇತನ್ ಕಂಪೋಸ್ ಮಾಡಿದ್ದು ಸಿಂಗಲ್ ಕಾರ್ಡ್ ಆಕ್ಷನ್ ಕ್ರೆಡಿಟ್ ಸಿಕ್ಕಿದೆ.

ಇತ್ತೀಚೆಗೆ ಒಂದೇ ಚಿತ್ರಕ್ಕೆ ಇಬ್ಬರೂ ಮೂವರು ಸ್ಟಂಟ್ ಮಾಸ್ಟರ್ ಕೆಲಸ ಮಾಡುವುದು ನೋಡಿದ್ದೇವೆ. ಆದರೆ ಚೇತನ್ ಡಿಸೋಜಾ ಕೆಲಸ ನೋಡಿ 'ಜೈಲರ್- 2' ಚಿತ್ರದ ಅಷ್ಟು ಆಕ್ಷನ್ ಬ್ಲಾಕ್ಸ್ ಡಿಸೈನ್ ಮಾಡುವ ಅವಕಾಶ ಕೊಟ್ಟಿದ್ದಾರೆ. ಉಡುಪಿ ಮೂಲದ ಕನ್ನಡಿಗ ಚೇತನ್ ಡಿಸೋಜಾ ಶಾಲಾ ದಿನಗಳಲ್ಲಿ ಕರಾಟೆ ಕಲಿಯಲು ಆರಂಭಿಸಿದರು. ಬಳಿಕ ಜಿಮ್ನಾಸ್ಟಿಕ್ಸ್, ಕ್ಯಾಲಿಸ್ಥೆನಿಕ್ಸ್ ಸೇರಿದಂತೆ ವಿವಿಧ ಮೂವ್‌ಮೆಂಟ್ ಆರ್ಟ್ಸ್‌ಗಳಲ್ಲಿ ಪರಿಣತಿ ಪಡೆದರು. ಪಿಯುಸಿ ಓದುವಾಗಲೇ ಬ್ಲ್ಯಾಕ್ ಬೆಲ್ಟ್ ಪಡೆದ ಅವರು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಎರಡು ಬಾರಿ ರಾಜ್ಯ ಮಟ್ಟದ ಗ್ರ್ಯಾಂಡ್ ಚಾಂಪಿಯನ್ ಎನಿಸಿಕೊಂಡವರು.

2007ರಲ್ಲಿ ಬೆಂಗಳೂರಿಗೆ ಬಂದು ಅಕ್ಸೆಂಚರ್‌ ಕಂಪನಿಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡಿದ್ದರು. ಪವನ್ ಕುಮಾರ್ ನಿರ್ದೇಶನದ 'ಯು ಟರ್ನ್' ಚಿತ್ರಕ್ಕೆ ಮೊದಲ ಬಾರಿ ಕೆಲಸ ಮಾಡಿದ್ದರು. ಬಳಿಕ ಹಿಂತಿರುಗಿ ನೋಡಲಿಲ್ಲ. ಶಿವಣ್ಣ, ಪುನೀತ್ ರಾಜ್‌ಕುಮಾರ್, ಸುದೀಪ್, ಉಪೇಂದ್ರ, ಶ್ರೀಮುರಳಿ, ರಾಜ್ ಬಿ. ಶೆಟ್ಟಿ ಹೀಗೆ ಹಲವು ಸ್ಟಾರ್ ನಟರಿಗೆ ಚೇತನ್ ಆಕ್ಷನ್ ಕಂಪೋಸ್ ಮಾಡಿದ್ದಾರೆ. 'ಭಘೀರ', 'ಮ್ಯಾಕ್ಸ್', '45', 'ಭೈರತಿ ರಣಗಲ್' ಹೀಗೆ ಹಿಟ್ ಸಿನಿಮಾಗಳಲ್ಲಿ ಚೇತನ್ ಆಕ್ಷನ್ ನಿರ್ದೇಶನ ಮಾಡಿದ್ದಾರೆ.

ಎರಡು ದಶಕಗಳಿಗೂ ಹೆಚ್ಚು ಕಾಲ ಮಾರ್ಷಲ್ ಆರ್ಟ್ಸ್ ಹಾಗೂ ಮೂವ್‌ಮೆಂಟ್ ಆರ್ಟ್ಸ್‌ನಲ್ಲಿ ಅನುಭವ ಹೊಂದಿರುವ ಚೇತನ್ ಏಳು ಭಾಷೆ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಜ್ಯೂ. ಎನ್‌ಟಿಆರ್ ನಟನೆಯ 'ಡ್ರ್ಯಾಗನ್' ಚಿತ್ರಕ್ಕೆ ಸ್ಟಂಟ್ಸ್ ಕಂಪೋಸ್ ಮಾಡ್ತಿದ್ದಾರೆ. ಪ್ರಭಾಸ್ ನಟನೆಯ 'ಫೌಜಿ' ಹಾಗೂ ಸೂರ್ಯ ನಟನೆಯ 'ಸೀನ್' ಚಿತ್ರಕ್ಕೂ ಚೇತನ್ ಆಕ್ಷನ್ ಕೊರಿಯೋಗ್ರಫಿ ಮಾಡ್ತಿರೋದು ವಿಶೇಷ.

ಫಹಾದ್ ಫಾಸಿಲ್ ನಟನೆಯ 'ಧೂಮಂ' ಚಿತ್ರಕ್ಕೆ ಚೇತನ್ ಕೆಲಸ ಮಾಡಿದ್ದರು. ಅವರ ಕೆಲಸ ಮೆಚ್ಚಿ 'ಆವೇಶಂ' ಚಿತ್ರದಲ್ಲಿ ಅವಕಾಶ ಪಡೆದಿದ್ದರು. ಆ ಚಿತ್ರದ ಸ್ಟಂಟ್ಸ್ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಹಾಗಾಗಿ ನೆಲ್ಸನ್ ಕಣ್ಣಿಗೆ ಬಿದ್ದು 'ಜೈಲರ್- 2' ಚಿತ್ರದ ಟೀಸರ್‌ ಆಕ್ಷನ್ ಡಿಸೈನ್ ಮಾಡುವ ಸುವರ್ಣಾವಕಾಶ ಲಭಿಸಿತ್ತು. ಟೀಸರ್ ಹಿಟ್ ಆಗಿ ಮುಂದೆ ಇಡೀ ಚಿತ್ರಕ್ಕೆ ಕೆಲಸ ಮಾಡುವಂತಾಯಿತು. ಕನ್ನಡದ ಪ್ರತಿಭೆಗೆ ಆಲ್ ದಿ ಬೆಸ್ಟ್ ಹೇಳೋಣ.