ನೆಲ್ಸನ್ ನಿರ್ದೇಶನದಲ್ಲಿ ರಜನಿಕಾಂತ್ ನಟನೆಯ 'ಜೈಲರ್- 2' ಟ್ರೈಲರ್ ಸಖತ್ ಸದ್ದು ಮಾಡ್ತಿದೆ. ಮೂರು ವರ್ಷಗಳ ಹಿಂದೆ ಬಂದಿದ್ದ ಸಿನಿಮಾ ಸೀಕ್ವೆಲ್ ಇದು. ದಸರಾ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಮತ್ತೊಮ್ಮೆ ತಲೈವಾ ಜೊತೆಗೆ ಮೋಹನ್ ಲಾಲ್ ಹಾಗೂ ಶಿವಣ್ಣ ಅಬ್ಬರಿಸಿದ್ದಾರೆ. ಟ್ರೈಲರ್ ಪರೀಕ್ಷೆಯಲ್ಲಿ ಚಿತ್ರತಂಡ ಬಹುತೇಕ ಗೆದ್ದಿದೆ.
ಟೈಗರ್ ಮುತ್ತುವೇಲ್ ಪಾಂಡಿಯನ್ ಮಿಷನ್ ಇನ್ನು ಕಂಪ್ಲೀಟ್ ಆಗಿಲ್ಲ. ಮತ್ತಷ್ಟು ದುಷ್ಟರನ್ನು ಸುಟ್ಟು ಹಾಕಲು ಮತ್ತೆ ಟೈಗರ್ ಅಖಾಡಕ್ಕಿಳಿದೆ. ನರಸಿಂಹ ಹಾಗೂ ಮ್ಯಾಥ್ಯೂ ಸಾಥ್ ಕೂಡ ಸಿಕ್ಕಿದೆ. ಮತ್ತಷ್ಟು ರಾಕ್ಷಸರ ಬೇಟೆಗೆ ಮುಹೂರ್ತ ಫಿಕ್ಸ್ ಆಗಿದೆ. ಎರಡೂವರೆ ನಿಮಿಷದ ಝಲಕ್ ಸೂಪರ್ ಸ್ಟಾರ್ ಅಭಿಮಾನಿಗಳ ಮನ ಗೆದ್ದಿದೆ.
ತಲೈವಾಗಿಂತ ಒಂದೇ ಒಂದು ಫ್ರೇಮ್‌ನಲ್ಲಿ ಬರುವ ಮೋಹನ್ ಲಾಲ್ ಎಲ್ಲರ ಗಮನ ಸೆಳೆಸಿದ್ದಾರೆ. ಲಾಲೆಟ್ಟನ್ ಸ್ಕ್ರೀನ್ ಪ್ರಸೆನ್ಸ್ ಸಿಂಪ್ಲಿ ಸೂಪರ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ. ನರಸಿಂಹ ಆಗಿ ಸಣ್ಣ ಝಲಕ್‌ನಲ್ಲಿ ಬರುವ ಶಿವಣ್ಣ ಆರ್ಭಟಕ್ಕೂ ಒಳ್ಳೆ ಮಾರ್ಕ್ ಸಿಕ್ಕಿದೆ. ಇದೆಲ್ಲದರ ನಡುವೆ ಕನ್ನಡದಲ್ಲಿ ಟ್ರೈಲರ್ ಬಿಟ್ಟಿಲ್ಲ ಎಂದು ಕನ್ನಡ ಸಿನಿಪ್ರೇಕ್ಷಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ, ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತೆ ಅಂದಮೇಲೆ ಟ್ರೈಲರ್ ಯಾಕೆ ಬಿಡಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದೇ ಮೊದಲಲ್ಲ ಈ ಹಿಂದೆ ಕೂಡ ಸಾಕಷ್ಟು ಪರಭಾಷಾ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುವ ಮುನ್ನ ಇದೇ ರೀತಿ ಮಾಡ್ತಾ ಬರ್ತಿದ್ದಾರೆ. 'ಜೈಲರ್- 2' ಸಿನಿಮಾ ತೆರೆಗೆ ಬರಲು 10 ದಿನ ಬಾಕಿಯಿದೆ. ಇನ್ನು ಕನ್ನಡ ವರ್ಷನ್ ಡಬ್ಬಿಂಗ್ ಆಗಿಲ್ಲ, ಟ್ರೈಲರ್ ಕಟ್ ಮಾಡಿಲ್ವಾ? ಅಥವಾ ಕನ್ನಡದಲ್ಲಿ ಸಿನಿಮಾ ಬಿಡುಗಡೆ ಆಗಲ್ವಾ? ಎನ್ನುವ ಚರ್ಚೆ ಶುರುವಾಗಿದೆ. ಬೇಕೆಂದೇ ಹೀಗೆ ಕನ್ನಡ ಟ್ರೈಲರ್ ಬಿಟ್ಟಿಲ್ಲ ಎಂದು ಕೆಲವರು ಆಕ್ರೋಶ ಹೊರ ಹಾಕುತ್ತಿದ್ದಾರೆ.
'ಜೈಲರ್- 2' ಸಿನಿಮಾ ಅಕ್ಟೋಬರ್ 16ರಂದು ತೆರೆಗೆ ಬರ್ತಿದೆ. ಈ ಬಾರಿ ಹೃತಿಕ್ ರೋಷನ್ ಹಾಗೂ ವಿಜಯ್ ಸೇತುಪತಿ ಕೂಡ ಚಿತ್ರದಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ. ವಿದ್ಯಾಬಾಲನ್, ಎಸ್. ಜೆ ಸೂರ್ಯ ಕೂಡ ಖಡಕ್ ಪಾತ್ರಗಳಲ್ಲಿ ಅಬ್ಬರಿಸಿದ್ದಾರೆ. ಆಕ್ಷನ್ ಜೊತೆಗೆ ಕಾಮಿಡಿ ಸೇರಿಸಿ ನೆಲ್ಸನ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ.