'ಸಲಾರ್' ಬಳಿಕ ಜ್ಯೂ. ಎನ್ಟಿಆರ್ ಜೊತೆ 'ಡ್ರ್ಯಾಗನ್' ಸಿನಿಮಾ ಮಾಡ್ತಿದ್ದಾರೆ ಪ್ರಶಾಂತ್ ನೀಲ್. ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ತಡವಾಗುತ್ತಿದೆ. ಈ ವರ್ಷ ಸಂಕ್ರಾಂತಿಗೆ ಬರಬೇಕಿದ್ದ ಸಿನಿಮಾ ಸಿನಿಮಾ ಬಳಿಕ 6 ತಿಂಗಳು ತಡವಾಗುವುದಾಗಿ ಚಿತ್ರತಂಡ ಹೇಳಿತ್ತು. ನಂತರ ಸಿನಿಮಾ ಬಿಡುಗಡೆ ಏಕಾಏಕಿ ಒಂದು ವರ್ಷ ಮುಂದೂಡಲಾಗಿತ್ತು.
ಆಕ್ಷನ್ ಥ್ರಿಲ್ಲರ್ 'ಡ್ರ್ಯಾಗನ್' ಚಿತ್ರದಲ್ಲಿ ಹೊಸ ಪ್ರಪಂಚವನ್ನು ನೀಲ್ ಕಟ್ಟಿಕೊಡುತ್ತಿದ್ದಾರೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆಯುವ, ಜಾಗತಿಕ ಮಟ್ಟದ ಕ್ರೂರ ಅಫೀಮು ಮತ್ತು ಹೆರಾಯಿನ್ ಕಳ್ಳಸಾಗಣೆ ಜಾಲದ ಸುತ್ತಾ ಚಿತ್ರದ ಕಥೆ ಹೇಳಲಾಗ್ತಿದೆ. 'ಆಫ್ಘನ್ ಟ್ರೇಡಿಂಗ್ ಕಂಪನಿ'ಯ ಅಸ್ಸಾಸಿನ್-ಇನ್-ಚೀಫ್ ಆಗಿ ತಾರಕ್ ನಟಿಸುತ್ತಿದ್ದಾರೆ. 'ಲ್ಯುಗರ್' (Luger) ಎಂಬ ಪಾತ್ರದಲ್ಲಿ ಅಬ್ಬರಿಸೋಕೆ ಬರ್ತಿದ್ದಾರೆ. ಸದ್ಯ ಚಿತ್ರವನ್ನು ಎರಡು ಭಾಗಳಾಗಿ ತೆರೆಗೆ ತರುವ ಪ್ರಯತ್ನ ನಡೀತಿದೆ.
ಒಂದೇ ಕಥೆಯನ್ನು ಎರಡು ಭಾಗಗಳಾಗಿ ತೆರೆಗೆ ತರುವುದು ಈಗ ಸರ್ವೇಸಾಮಾನ್ಯ ಎನ್ನುವಂತಾಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಇದೇ ರೀತಿ ಪ್ಲ್ಯಾನ್ ಮಾಡಲಾಗ್ತಿದೆ. ಸಾಧ್ಯವಾಗದೇ ಇದ್ರೆ ಕೊನೆ ಪಕ್ಷ ಕ್ಲೈಮ್ಯಾಕ್ಸ್ನಲ್ಲಿ ಟ್ವಿಸ್ಟ್ ಇಟ್ಟು ಪಾರ್ಟ್- 2 ಬಗ್ಗೆ ಕುತೂಹಲ ಮೂಡಿಸುವ ಪ್ರಯತ್ನ ಮಾಡ್ತಿದ್ದಾರೆ. ಒಂದು ಸಿನಿಮಾ ಮಾಡಿ ಮತ್ತೊಂದು ಸಿನಿಮಾವನ್ನು ಎರಡ್ಮೂರು ವರ್ಷಗಳ ಬಳಿಕ ತೆರೆಗೆ ತರುತ್ತಾರೆ. ಆದರೆ 'ಧುರಂಧರ್' ಸರಣಿಯಲ್ಲಿ ಕೊಂಚ ವಿಭಿನ್ನ ಪ್ರಯತ್ನ ಮಾಡಲಾಗಿತ್ತು. ಒಮ್ಮೆಲೆ 7 ಗಂಟೆ ಸಿನಿಮಾ ಚಿತ್ರೀಕರಣ ಮಾಡಿ ಬಳಿಕ ಅದನ್ನು ಎರಡು ಭಾಗಗಳಾಗಿ ಕೇವಲ 4 ತಿಂಗಳ ಅಂತರದಲ್ಲಿ ತೆರೆಗೆ ತಂದಿದ್ದರು.
'ಧುರಂಧರ್' ಸರಣಿ ರೀತಿ 'ಡ್ರ್ಯಾಗನ್' ಸರಣಿಯನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ ಎನ್ನಲಾಗ್ತಿದೆ. ಒಮ್ಮೆಲೆ ಎರಡೂ ಭಾಗದ ಸಿನಿಮಾ ಚಿತ್ರೀಕರಣ ಮುಗಿಸಿ ನಾಲ್ಕೈದು ತಿಂಗಳ ಅಂತರದಲ್ಲಿ ಎರಡು ಸಿನಿಮಾ ತೆರೆಗೆ ತರುವ ಸಾಹಸ ಮಾಡುತ್ತಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಈಗಾಗಲೇ 'ಡ್ರ್ಯಾಗನ್' ಚಿತ್ರದ ಫಸ್ಟ್ ಗ್ಲಿಂಪ್ಸ್ ಹೊರಬಂದು ಹಿಟ್ ಆಗಿದೆ. ಬಹಳ ದೊಡ್ಡಮಟ್ಟದಲ್ಲೇ ಪ್ರಶಾಂತ್ ನೀಲ್ ಸಿನಿಮಾ ತೆರೆಗೆ ತರುತ್ತಿರುವುದು ಗೊತ್ತಾಗುತ್ತಿದೆ. ರುಕ್ಮಿಣಿ ವಸಂತ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಅನಿಲ್ ಕಪೂರ್, ಬಿಜು ಮೆನನ್, ಖುಷ್ಬು ಸುಂದರ್, ಅಶುತೋಷ್ ರಾಣ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಭುವನ್ ಗೌಡ ಛಾಯಾಗ್ರಹಣ ಹಾಗೂ ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ಕನ್ನಡ ತಂತ್ರಜ್ಞರ ಕೈಚಳಕದಲ್ಲಿ ಮೂಡಿ ಬರುತ್ತಿರುವ ಸಿನಿಮಾ 'ಡ್ರ್ಯಾಗನ್' ಎನ್ನಬಹುದು. ನಿಜಕ್ಕೂ ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರುತ್ತಾ ? ಕಾದು ನೋಡಬೇಕು.