ಸ್ಟಾರ್‌ಡಮ್ ಎನ್ನುವುದನ್ನು ಸ್ಟಾರ್ ನಟರ ಹಿಟ್ ಸಿನಿಮಾಗಳಿಂದ ಅಳೆಯಬಾರದು. ಆತನ ಕೆಟ್ಟ ಸಿನಿಮಾಗಳಿಂದ ಲೆಕ್ಕ ಹಾಕಬೇಕು ಎಂದು ನಟ ಆಮೀರ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಸ್ಟಾರ್ ನಟ ಒಳ್ಳೆ ಸಿನಿಮಾದಲ್ಲಿ ನಟಿಸಿದ್ರೆ ಬ್ಲಾಕ್‌ಬಸ್ಟರ್ ಹಿಟ್ ಆಗುತ್ತೆ. ಆದ್ರೆ ಕೆಟ್ಟ ಮಾಡಿ ಸ್ಟಾರ್ ನಟ ನಟಿಸಿದ್ದಾನೆ ಅಂದ ಮಾತ್ರಕ್ಕೆ ಸಿನಿಮಾ ಹಿಟ್ ಆಗುತ್ತಾ ? ಎಂದು ಪ್ರಶ್ನಿಸಿದ್ದರು.
ಎಲ್ಲೆಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳ ಹವಾ ನಡೀತಿದೆ. ನೂರಾರು ಕೋಟಿ ಬಂಡವಾಳ ಸುರಿದು ಮೂರ್ನಾಲ್ಕು ವರ್ಷ ಶ್ರಮಿಸಿ ಸಿನಿಮಾಗಳನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಎಲ್ಲಾ ಸಿನಿಮಾಗಳು ಹಿಟ್ ಆಗ್ತಿಲ್ಲ. ಈಗಾಗಲೇ 1000 ಕೋಟಿ ಕಲೆಕ್ಷನ್ ಸಿನಿಮಾಗಳ ಟ್ರೆಂಡ್ ನಡೀತಿದೆ. 'ದಂಗಲ್', 'ಬಾಹುಬಲಿ-2', 'ಕೆಜಿಎಫ್-2', 'ಆರ್‌ಆರ್‌ಆರ್', 'ಜವಾನ್', 'ಪಠಾಣ್', 'ಪುಷ್ಪ-2', 'ಕಲ್ಕಿ 2898AD' ಹಾಗೂ 'ಧುರಂಧರ್' ಸರಣಿ ಸಿನಿಮಾಗಳು 1000 ಕೋಟಿ ಕ್ಲಬ್ ಸೇರಿ ದಾಖಲೆ ಬರೆದಿದ್ದವು.
ಹೀಗೆ 1000 ಕೋಟಿ ಕಲೆಕ್ಷನ್ ಸಿನಿಮಾಗಳನ್ನು ಹೀರೊಗಳ ಮುಂದಿನ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. 'ಟಾಕ್ಸಿಕ್' ಮೂಲಕ ಅದು ಮತ್ತೆ ಮುಂದುವರೆದಿದೆ. ಸರಿಯಾಗಿ ಗಮನಿಸಿದರೆ 'ಬಾಹುಬಲಿ-2' ಬಳಿಕ ಪ್ರಭಾಸ್ ನಟಿಸಿದ್ದ 'ಸಾಹೋ' ಸಿನಿಮಾ ಮುಗ್ಗರಿಸಿತ್ತು. ಅಂತೂ ಇಂತೂ ಆವರೇಜ್ ಹಿಟ್ ಅನಿಸಿಕೊಂಡಿತ್ತು. ಯಶ್ ನಟನೆಯ 'ಟಾಕ್ಸಿಕ್' ರೀತಿಯಲ್ಲೇ ತಡವಾಗಿ ಬಂದಿದ್ದ ಆ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿತ್ತು.
'ದಂಗಲ್' ಬಳಿಕ ಆಮೀರ್ ಖಾನ್ ಹೀರೊ ಆಗಿ ನಟಿಸಿದ್ದ 'ಥಗ್ಸ್ ಆಫ್ ಹಿಂದೂಸ್ತಾನ್' ಸಿನಿಮಾ ಕೂಡ ಹೀನಾಯವಾಗಿ ಸೋತಿತ್ತು. ಇನ್ನು 'ಆರ್‌ಆರ್‌ಆರ್' ಬಳಿಕ ರಾಮ್‌ಚರಣ್ ನಟಿಸಿದ 'ಗೇಮ್‌ಚೇಂಜರ್', ಜ್ಯೂ. ಎನ್‌ಟಿಆರ್ ನಟನೆಯ 'ದೇವರ' ಚಿತ್ರಗಳು ನಿರಾಸೆ ಮೂಡಿಸಿದ್ದು ಗೊತ್ತೇಯಿದೆ. 'ಕಲ್ಕಿ 2898AD' ಬಳಿಕ ಬಂದ ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಫಲಿತಾಂಶ ಏನಾಯ್ತು ಎನ್ನುವುದು ಕಣ್ಣಮುಂದಿದೆ.
'ಧುರಂಧರ್' ಸರಣಿ ಸಿನಿಮಾಗಳೆರಡು 1000 ಕೋಟಿ ರೂ. ಗಳಿಸಿದ್ದು ದಾಖಲೆಯೇ ಸರಿ. ಆದರೆ ರಣ್‌ವೀರ್ ಸಿಂಗ್ ನಟನೆಯ ಮುಂದಿನ ಸಿನಿಮಾ ಭವಿಷ್ಯ ಕಾದು ನೋಡಬೇಕು. ಅದೇ ರೀತಿ ಅಲ್ಲು ಅರ್ಜುನ್ ಎರಡನೇ ಬಾರಿ 'ಪುಷ್ಪರಾಜ್' ಆಗಿ ಬಂದು 1000 ಕೋಟಿ ಬಾಕ್ಸಾಫೀಸ್ ಕ್ಲಬ್ ಸಿನಿಮಾ ಕೊಟ್ಟಿದ್ದರು. ಮುಂದೆ ಅವರು ನಟಿಸುತ್ತಿರುವ 'ರಾಕಾ' ಚಿತ್ರದ ಫಲಿತಾಂಶ ಏನಾಗುತ್ತದೆ ಎನ್ನುವುದಕ್ಕೆ ಶೀಘ್ರದಲ್ಲೇ ಉತ್ತರ ಸಿಗಲಿದೆ. 'ಜವಾನ್' ನಂತ್ರ ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಕೂಡ 1000 ಕೋಟಿ ಕಲೆಕ್ಷನ್ ಮಾಡಿದ್ದು ವಿಶೇಷ. ಹಾಗಾಗಿ ಈ ಪಟ್ಟಿಯಲ್ಲಿ ಬಾಲಿವುಡ್ ಕಿಂಗ್ ಖಾನ್ ಮಾತ್ರ ವಿಶೇಷವಾಗಿ ನಿಲ್ಲುತ್ತಾರೆ.