ಮತ್ತೊಮ್ಮೆ ಪತಿ ಯುವ ರಾಜ್‌ಕುಮಾರ್ ವಿರುದ್ಧ ಪತ್ನಿ ಶ್ರೀದೇವಿ ಭೈರಪ್ಪ ಕಾಮೆಂಟ್ ಮಾಡಿದ್ದಾರೆ. 'ಆಕೆ'ಯ ಬಗ್ಗೆ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ. ನಾನು ಆಕೆಗೆ ಇಷ್ಟೇ ಹೇಳಲು ಬಯಸುತ್ತೇನೆ: "ನೀನು ಏನೂ ಸ್ಪೆಷಲ್ ಅಲ್ಲ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ "ಬನ್ನಿ ಅತ್ತಿಗೆ.. ಅಣ್ಣನ ಜೊತೆಗಿರಿ" ಎಂದು ಅಭಿಮಾನಿಯೊಬ್ಬರು ಮಾಡಿದ್ದ ಕಾಮೆಂಟ್ ಬಗ್ಗೆ ಶ್ರೀದೇವಿ ರಿಪ್ಲೇ ಮಾಡಿದ್ದರು. "ನಿಮ್ಮಣ್ಣ ಡಿವೋರ್ಸ್ ಆಗ್ದೆ ಸೈಡ್‌ಚಿಕ್ ಜೊತೆ ಇದ್ದಾರಲ್ಲ" ಎಂದು ಕುಟುಕಿದ್ದರು.

ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಒಂದಷ್ಟು ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. "ಅವನ(ಪತಿ ಯುವರಾಜ್‌ಕುಮಾರ್) ಫೋನ್‌ನಲ್ಲಿ ನನ್ನ ಇಂತಹ ಸಾವಿರಾರು ಫೋಟೋಗಳಿದ್ದವು; ಅದರಿಂದಾಗಿ ನಾನೇನೋ ತುಂಬಾ "ಸ್ಪೆಷಲ್" ಎಂದುಕೊಂಡಿದ್ದೆ. ಆದರೆ, ಒಂದು ದಿನ ಅವನ ಗ್ಯಾಲರಿಯಲ್ಲಿ ಇನ್ನೊಬ್ಬ ಹುಡುಗಿಯ ಇದೇ ರೀತಿಯ ಭಂಗಿಗಳ ಫೋಟೋಗಳನ್ನು ನೋಡುವವರೆಗೂ ಮಾತ್ರ ಆ ಭ್ರಮೆ ಇತ್ತು" ಎಂದು ಬರೆದುಕೊಂಡಿದ್ದಾರೆ.

"ನಾನು ಆಕೆಗೆ ಇಷ್ಟೇ ಹೇಳಲು ಬಯಸುತ್ತೇನೆ: "ನೀನು ಏನೂ ಸ್ಪೆಷಲ್ ಅಲ್ಲ." ಆ ಫೋಟೋಗಳ ಮೇಲೆ ಎಷ್ಟೇ 'ದೃಷ್ಟಿ ಬೊಟ್ಟು' ಇಟ್ಟರೂ ಪ್ರಯೋಜನವಿಲ್ಲ. ಅಷ್ಟೇ" ಎಂದು ಶ್ರೀದೇವಿ ಭೈರಪ್ಪ ತಿಳಿಸಿದ್ದಾರೆ. ಸಾಕಷ್ಟು ಜನ ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು 'ಎಕ್ಕ' ಚಿತ್ರದ ಸಣ್ಣ ಮೀಮ್ಸ್ ಹಂಚಿಕೊಂಡಿದ್ದಾರೆ. ಅದರಲ್ಲಿ ಯುವ ಜೊತೆಗೆ ಸಂಜನಾ ಆನಂದ್ ಇರುವುದನ್ನು ನೋಡಬಹುದು. ಇವಳು 'ಅವಳಲ್ಲ' ಎಂದು ಶ್ರೀದೇವಿ ರಿಪ್ಲೇ ಕೂಡ ಮಾಡಿರುವುದನ್ನು ನೋಡಬಹುದು.

ಯುವ ಹಾಗೂ ಶ್ರೀದೇವಿ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ಬೇರೆಯಾಗಿ ವಾಸಿಸುತ್ತಿದ್ದಾರೆ. ಈಗಾಗಲೇ ಯುವ ಪತ್ನಿಯಿಂದ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ನಾನು ಡಿವೋರ್ಸ್ ಕೊಡಲ್ಲ ಎಂದು ಶ್ರೀದೇವಿ ಪಟ್ಟು ಹಿಡಿದಿದ್ದಾರೆ. ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಪತಿಗೆ ಸಹನಟಿ ಜೊತೆ ಸಂಬಂಧವಿದೆ ಎಂದು ಶ್ರೀದೇವಿ ಆರೋಪಿಸಿದ್ದಾರೆ.