ಬಾಲಿವುಡ್ 'ಹನುಮಾನ್ ಅಂಶ್' ಸಿನಿಮಾ ಗೆಲುವಿನ ನಾಗಾಲೋಟ ಮುಂದುವರೆದಿದೆ. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದು ಸಿನಿಮಾ ಸದ್ದು ಮಾಡ್ತಿದೆ. ಓವರ್‌ಸೀಸ್ ಮಾರ್ಕೆಟ್‌ನಲ್ಲಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡಿತ್ತು. 2026ರ ವಿದೇಶಿ ಮಾರುಕಟ್ಟೆಯಲ್ಲಿ 2ನೇ ಅತಿ ಹೆಚ್ಚು ಗಳಿಕೆ ಚಿತ್ರ ಎನಿಸಿಕೊಂಡಿದೆ. ಹೊಂಬಾಳೆ ಓವರ್‌ಸೀಸ್‌ಗೆ ಮತ್ತೊಂದು ದೊಡ್ಡ ಮೈಲಿಗಲ್ಲಾಗಿದೆ.

ಆಗಸ್ಟ್ 7ರಂದು 'ಹನುಮಾನ್ ಅಂಶ್' ಸಿನಿಮಾ ತೆರೆಗೆ ಬಂದಿತ್ತು. ಸೆಪ್ಟೆಂಬರ್ 11ರಂದು ವಿದೇಶಗಳಲ್ಲಿ ಬಿಡುಗಡೆಯಾದ ಚಿತ್ರವು ಕೇವಲ 12 ದಿನಗಳಲ್ಲಿ 3.5 ಮಿಲಿಯನ್ ಡಾಲರ್‌ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿದೆ. ಈ ಬಗ್ಗೆ ಹೊಂಬಾಳೆ ಸಂಸ್ಥೆ ಪ್ರತಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಕೇವಲ 2 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಬಯೋಪಿಕ್ ಸಿನಿಮಾ ಒಟ್ಟಾರೆ 300 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡು ಗಮನ ಸೆಳೆದಿದೆ.

ಮೊದಲ ದಿನದಿಂದಲೂ ವಿದೇಶಿ ಪ್ರೇಕ್ಷಕರಿಂದ 'ಹನುಮಾನ್ ಅಂಶ್' ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. ದಿನದಿಂದ ದಿನಕ್ಕೆ ತನ್ನ ಗಳಿಕೆಯನ್ನು ಹೆಚ್ಚಿಸಿಕೊಂಡು ಸಿನಿಮಾ ಆರ್ಭಟ ಮುಂದುವರೆಸಿದೆ. ಚಿತ್ರದಲ್ಲಿರುವ ಭಕ್ತಿ, ನಂಬಿಕೆ ಹಾಗೂ ಮಹಾರಾಜ್‌ಜಿಯ ಮೌಲ್ಯಗಳು ದೇಶದ ಗಡಿಗಳನ್ನು ಮೀರಿ ಪ್ರೇಕ್ಷಕರಿಗೆ ಕನೆಕ್ಟ್ ಆಗಿದೆ. ಓವರ್‌ಸೀಸ್ ಮಾರ್ಕೆಟ್‌ನಲ್ಲಿ ಹೊಂಬಾಳೆ ಸಂಸ್ಥೆಗೆ ಬಲ ತುಂಬಿದೆ.

ಕೇವಲ 12 ದಿನಗಳಲ್ಲಿ 3.5 ಮಿಲಿಯನ್ ಡಾಲರ್‌ ನಿಜಕ್ಕೂ ದಾಖಲೆಯೇ ಸರಿ. ಯಾವುದೇ ಸ್ಟಾರ್ ನಟರಿಲ್ಲದ ಚಿತ್ರವೊಂದು ದೇಶ ವಿದೇಶಗಳಲ್ಲಿ ಸಂಚಲನ ಸೃಷ್ಟಿಸಿರುವುದು ಸುಳ್ಳಲ್ಲ. ವಿದೇಶಗಳಲ್ಲಿ ಚಿತ್ರದ ಯಶಸ್ಸಿನ ಬಗ್ಗೆ ನಿರ್ಮಾಪಕರು ಮಾತನಾಡಿ "ಹನುಮಾನ್‌ಜಿಯ ದೂತರಂತೆ ಹೊಂಬಾಳೆ ಓವರ್‌ಸೀಸ್ ನಮ್ಮ ಜೊತೆ ನಿಂತಿದೆ. ಅವರ ಮೂಲಕ ಸಿನಿಮಾ ಎಂಬ ವಿಶಾಲ ಜಗತ್ತಿನ ಬಾಗಿಲು ನಮಗೆ ತೆರೆದಿದೆ. ಮಹಾರಾಜ್‌ಜಿಯ ಮೌಲ್ಯಗಳನ್ನು ವಿಶ್ವದಾದ್ಯಂತ ತಲುಪಿಸಲು ಅವರು ನೀಡಿದ ಅವಕಾಶಕ್ಕೆ ನಮ್ಮ ಕೃತಜ್ಞತೆ" ಎಂದಿದ್ದಾರೆ.