'ಕಾಂತಾರ' ಸಿನಿಮಾ ಇತ್ತೀಚೆಗೆ ನಾಲ್ಕು ವರ್ಷ ಪೂರೈಸಿತ್ತು. ಅದರ ಬೆನ್ನಲ್ಲೇ 'ಕಾಂತಾರ-1' ಸಿನಿಮಾ ವರ್ಷ ಪೂರೈಸಿದ್ದನ್ನು ಚಿತ್ರತಂಡ ಮೆಲುಕು ಹಾಕಿದೆ. ಆದರೆ ಒಂದು ತಂಡವಾಗಿ ಸಂಭ್ರಮಿಸುತ್ತಿಲ್ಲ ಎನ್ನುವುದೇ ಬೇಸರದ ಸಂಗತಿ. ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್ ಶೆಟ್ಟಿ ನಡುವಿನ ಭಿನ್ನಾಭಿಪ್ರಾಯ ಗುಟ್ಟಾಗಿ ಏನು ಉಳಿದಿಲ್ಲ. ಅದು ಮತ್ತೆ ಮತ್ತೆ ಎಲ್ಲರಿಗೂ ನೆನಪಿಸುವಂತಿದೆ ಇತ್ತೀಚಿನ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು.

ಸೆಪ್ಟೆಂಬರ್ 30ರಂದು 'ಕಾಂತಾರ' ಚಿತ್ರ ನಾಲ್ಕು ವರ್ಷದ ಸಂಭ್ರಮದ ಪೋಸ್ಟ್ ಅನ್ನು ರಿಷಬ್ ಶೆಟ್ಟಿ ಹಾಕಿದ್ದರು. ಅದರಲ್ಲಿ ಹೊಂಬಾಳೆ ಹೆಸರು ಇರಲಿಲ್ಲ. ಅದರ ಕೌಂಟರ್ ಎನ್ನುವಂತೆ ರಿಷಬ್ ಶೆಟ್ಟಿ ಹೆಸರು ಪ್ರಸ್ತಾಪಿಸದೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕೂಡ ಪೋಸ್ಟ್ ಮಾಡಿತ್ತು. ಬೇಕೆಂದೇ ಹೆಸರು ಬಿಟ್ಟಿದ್ದು ಗೊತ್ತಾಗಿತ್ತು. ತಮ್ಮ ವೈಮನಸ್ಸನ್ನು ಸಾರಿ ಸಾರಿ ಹೇಳಿದ್ದರು. ಇದು ಅಲ್ಲಿಗೆ ಮುಗಿದಿದ್ದರೆ ಪರವಾಗಿಲ್ಲ. 'ಕಾಂತಾರ-1' ಚಿತ್ರ ವರ್ಷ ಪೂರೈಸಿದ್ದನ್ನು ನೆನಪಿಸೋ ಪೋಸ್ಟ್‌ನಲ್ಲಿ ಅದು ಮತ್ತೆ ಜಗಜ್ಜಾಹೀರಾಗಿದೆ.

ಹುಲಿಯ ಚಿತ್ರ ಇರುವ ಪೋಸ್ಟರ್ ಬಿಟ್ಟು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಪೋಸ್ಟ್ ಮಾಡಿದೆ. ಚಿತ್ರಕ್ಕಾಗಿ ತಮ್ಮ ಪರಿಶ್ರಮ ಹೇಗಿತ್ತು ಎನ್ನುವ ವೀಡಿಯೋ ಸಮೇತ "ರಿಷಬ್ ಶೆಟ್ಟಿ ಐದು ವರ್ಷ… ಎರಡು ಕಥೆ… ಒಂದು ಕನಸು … ಮರೆಯಲಾಗದ ಪಯಣ" ಎಂದು ಬರೆದುಕೊಂಡಿದ್ದಾರೆ. ಸದ್ಯ ಚಿತ್ರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕೂಡ ಒಂದು ಪೋಸ್ಟ್ ಮಾಡಿದ್ದಾರೆ. ಸಿನಿಮಾ ಪೋಸ್ಟರ್ ಬಿಟ್ಟು Ai ಬಳಸಿ ಸೃಷ್ಟಿಸಿದ ಪೋಸ್ಟರ್ ಅನ್ನು ಅವ್ರು ಹಂಚಿಕೊಂಡಿದ್ದಾರೆ.

ಹೊಂಬಾಳೆ ಹಾಗೂ ರಿಷಬ್ ನಡುವೆ ಬಿರುಕು ಮೂಡಿದೆ. ಹಾಗಾಗಿ ತಾನು ಯಾವ ಪಕ್ಷ ಸೇರಬೇಕು ಎನ್ನುವ ಗೊಂದಲದಲ್ಲಿ ಅಜನೀಶ್ ಹೀಗೆ ಪೋಸ್ಟ್ ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ ಚಿತ್ರತಂಡದಲ್ಲೇ ಭಾರೀ ಭಿನ್ನಾಭಿಪ್ರಾಯಗಳಿವೆ. ಇನ್‌ಸ್ಟಾಗ್ರಾಮ್‌ನಲ್ಲಿ ರುಕ್ಮಿಣಿ ವಸಂತ್ ಅವರನ್ನು ಕೂಡ ರಿಷಬ್ ಶೆಟ್ಟಿ ಅನ್‌ಫಾಲೋ ಮಾಡಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ರುಕ್ಮಿಣಿ ವಸಂತ್ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಹೊಂಬಾಳೆ ಫಿಲ್ಮ್ಸ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ 'ಕಾಂತಾರ- 1' ಚಿತ್ರದ ಒಂದು ವರ್ಷ ಪೂರೈಸಿದ್ದನ್ನು ಮೆಲುಕು ಹಾಕಿದ್ದಾರೆ. ರಿಷಬ್ ಶೆಟ್ಟಿ ಜೊತೆಗಿನ ಫೋಟೊ ಕೂಡ ಅದರಲ್ಲಿದೆ. ಆದರೆ ರಿಷಬ್ ಶೆಟ್ಟಿ ಅಥವಾ ಹೊಂಬಾಳೆ ಹೆಸರು ಪ್ರಸ್ತಾಪ ಮಾಡುವ ಗೋಜಿಗೆ ಹೋಗಿಲ್ಲ.