ಡಾಲಿ ಪಿಕ್ಚರ್ಸ್ ಬ್ಯಾನರ್ನಲ್ಲಿ ನಟ ಡಾಲಿ ಧನಂಜಯ್ ನಿರ್ಮಿಸಿದ್ದ 'ಹೆಗ್ಗಣ ಮುದ್ದು' ಸಿನಿಮಾ ಓಟಿಟಿಗೆ ಬಂದಿದೆ. ಅವಿನಾಶ್ ಬಲೆಕ್ಕಳ ನಿರ್ದೇಶನದ ಕಾಮಿಡಿ ಎಂಟರ್ಟ್ರೈನರ್ ಚಿತ್ರದಲ್ಲಿ ಪೂರ್ಣಚಂದ್ರ ಮೈಸೂರು ಮತ್ತು ಅದಿತಿ ಸಾಗರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಅಜಿತ್(ಪೂರ್ಣಚಂದ್ರ ) ಮತ್ತು ಪ್ರೇರಣಾ(ಅದಿತಿ) ಎಂಬ ನವವಿವಾಹಿತ ಜೋಡಿಯ ದಾಂಪತ್ಯ ಜೀವನದ ಸುತ್ತ ಚಿತ್ರದ ಕಥೆ ಹೆಣೆಯಲಾಗಿದೆ. ಪ್ರೀತಿ, ಮದುವೆ, ಹಣ, ಅಸೂಯೆ ಹಾಗೂ ಸಂಬಂಧಗಳ ನಡುವಿನ ಅನುಮಾನಗಳನ್ನು ಆಧರಿಸಿ 'ಹೆಗ್ಗಣ ಮುದ್ದು' ಸಿನಿಮಾ ತೆರೆಗೆ ತರಲಾಗಿತ್ತು. ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕರೂ ದೊಡ್ಡಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ.
ಸದ್ಯ ಅಮೇಜಾನ್ ಪ್ರೈಂ ವೀಡಿಯೋದಲ್ಲಿ 'ಹೆಗ್ಗಣ ಮುದ್ದು' ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಓಟಿಟಿಯಲ್ಲಿ ಕನ್ನಡ ಸಿನಿಮಾಗಳು ಬರುವುದೇ ಅಪರೂಪ ಎನ್ನುವಂತಾಗಿದೆ. ಹಾಗಾಗಿ ವೀಕೆಂಡ್ ಮನೆಯಲ್ಲೇ ಕೂತು ನೋಡಲು ಇದು ಒಳ್ಳೆಯ ಆಯ್ಕೆ ಆಗಿರಲಿದೆ. ಇನ್ನು ನಚಿಕೇತ್ ಬಲೆಕ್ಕಳ ಛಾಯಾಗ್ರಹಣ, ಕಾರ್ತಿಕ್ ಚೆನ್ನೋಜಿ ರಾವ್ ಹಾಗೂ ರೊಣದ ಬಕ್ಕೇಶ್ ಸಂಗೀತ ನಿರ್ದೇಶನ, ಪ್ರತೀಕ್ ಶೆಟ್ಟಿ ಸಂಕಲನ ಈ ಚಿತ್ರಕ್ಕಿದೆ. ಕಾಮಿಡಿ, ಡ್ರಾಮಾ ಹಾಗೂ ಥ್ರಿಲ್ಲರ್ ಅಂಶಗಳು ಚಿತ್ರದಲ್ಲಿದೆ.
ವಿಜಯ್ ಶೋಭರಾಜ್ ಪಾವೂರು, ಭರತ್ ನಾಯಕ್, ಮೈಸೂರು ಆನಂದ್, ರೇಖಾ ಕೂಡ್ಲಿಗಿ 'ಹೆಗ್ಗಣ ಮುದ್ದು' ಚಿತ್ರ ತಾರಾಗಣದಲ್ಲಿದ್ದಾರೆ. ತಮ್ಮ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಧನಂಜಯ್ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ದಾರೆ. ಅಂಥದ್ದೇ ಪ್ರಯತ್ನ ಇದಾಗಿತ್ತು. ಈಗ ಓಟಿಟಿಯಲ್ಲೇ ಸಿನಿಮಾ ನೋಡಿ ಎಂಜಾಯ್ ಮಾಡಬಹುದು.