ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಮೊದಲ ಭಾಗ ಚಿತ್ರಮಂದಿರಗಳಲ್ಲಿ ಸಖತ್ ಸದ್ದು ಮಾಡ್ತಿದೆ. ಬಾಕ್ಸಾಫೀಸ್ನಲ್ಲಿ ಸಿನಿಮಾ ಕೋಟಿ ಕೋಟಿ ಕೊಳ್ಳೆ ಹೊಡೀತಿದೆ. ತೆರೆಮೇಲೆ ದೃಶ್ಯ ವೈಭವ, ಕಲಾವಿದರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ತ್ರೀಡಿಯಲ್ಲಿ ಚಿತ್ರ ನೋಡುಗರಿಗೆ ಅದ್ಭುತ ಅನುಭವ ನೀಡುತ್ತಿದೆ.
ರಾವಣನಾಗಿ ಯಶ್ ನಟನೆಗೆ ಪ್ರೇಕ್ಷಕರು ಬಹುಪರಾಕ್ ಎನ್ನುತ್ತಿದ್ದಾರೆ. ಉತ್ತರ ಭಾರತದ ಪ್ರೇಕ್ಷಕರು ಕೂಡ ರಾಕಿಂಗ್ ಸ್ಟಾರ್ ಆರ್ಭಟವನ್ನು ಮೆಚ್ಚಿಕೊಂಡಾಡುತ್ತಿದ್ದಾರೆ. ಬುದ್ಧಿವಂತಿಕೆ, ಅಹಂಕಾರ, ಭಕ್ತಿ ಹೀಗೆ ರಾವಣನ ಎಲ್ಲಾ ಗುಣಗಳನ್ನು ಯಶ್ ಆವಾಹಿಸಿಕೊಂಡಂತೆ ನಟಿಸಿ ಗೆದ್ದಿದ್ದಾರೆ. ಒಂದು ಹಂತಕ್ಕೆ ರಾವಣ ಯಶ್ ಮುಂದೆ ಶ್ರೀರಾಮ ರಣ್ಬೀರ್ ಕಪೂರ್ ಡಲ್ ಎನಿಸಿಬಿಟ್ಟಿದ್ದಾರೆ. ಅಭಿಮಾನಿಗಳಂತೂ ಇದು ರಾಮಾಯಣ ಅಲ್ಲ ರಾವಣಾಯಣ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ಚಿತ್ರದಲ್ಲಿ ಯಶ್ ಅಬ್ಬರಿಸಿ ಬೊಬ್ಬಿರಿದಿದ್ದಾರೆ.
ದುಷ್ಟ ರಾವಣನನ್ನು ಹೀರೋ ರೀತಿ ಚಿತ್ರೀಸಿದ್ದಾರೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ವಾಲ್ಮೀಕಿ ರಾಮಾಯಣದಲ್ಲಿ ರಾವಣನನ್ನು ಹೀಗೆ ಚಿತ್ರಿಸಿಲ್ಲ. ಯಶ್ ನಿರ್ಮಾಪಕ ಕೂಡ ಆಗಿರುವುದರಿಂದ ತಮಗೆ ಬೇಕಾದಂತೆ ಚಿತ್ರಕಥೆ ಮಾಡಿಕೊಂಡಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಸೀತಾಪಹರಣ ಬಿಟ್ಟು ರಾವಣ ಬೇರೆ ಯಾವುದೇ ತಪ್ಪು ಮಾಡಿಲ್ಲ. ಸೀತೆ ಮೇಲಿನ ಮೋಹದಿಂದ ಅಲ್ಲ ತಂಗಿಗೆ ಆಗಿರುವ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಸೀತಾಪಹರಣಕ್ಕೆ ಮುಂದಾದ ಎನ್ನುವಂತೆ ತೋರಿಸಿರುವುದು ಸರಿಯಲ್ಲ. ವಾಲ್ಮೀಕಿ ರಾಮಾಯಣ ಹೀಗೆ ಇಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬೇರೊಂದು ಯುದ್ಧದಲ್ಲಿ ವಿದ್ಯುಜ್ಜಿಹ್ವನನ್ನು ರಾವಣ ಕೊಂದು ಹಾಕುತ್ತಾನೆ. ಆದರೆ ಸದ್ಯ 'ರಾಮಯಾಣ' ಚಿತ್ರದಲ್ಲಿ ಒಬ್ಬ ಮಹಿಳೆಯ ಗೌರವಕ್ಕಾಗಿ ನಡೆದ ದ್ವಂದ್ವಯುದ್ಧ ಕಾರಣ ಎನ್ನುವಂತೆ ಬಿಂಬಿಸಿದ್ದಾರೆ. ರಂಭೆಯ ಮೇಲೆ ದೌರ್ಜನ್ಯವೆಸಗಿದ ರಾವಣನನ್ನು ಮಹಿಳೆ ಬಗ್ಗೆ ಅಪಾರ ಗೌರವ ಇರುವವನಂತೆ ತೋರಿಸಿದ್ದಾರೆ. ವಾಲ್ಮೀಕಿ ರಾಮಾಯಣದ ಪ್ರಕಾರ ಅಪಹರಣದ ವೇಳೆ ಸೀತೆಯ ಕೂದಲನ್ನು ಹಿಡಿದೆಳೆದು ಆಕೆಯ ಕಾಲುಗಳನ್ನು ಹಿಡಿದು ಬಲವಂತವಾಗಿ ತನ್ನ ಮಾಯಾವಿ ಪುಷ್ಪಕ ವಿಮಾನದಲ್ಲಿ ರಾವಣ ಆಕಾಶ ಮಾರ್ಗವಾಗಿ ಹಾರುತ್ತಾನೆ. ಚಿತ್ರದಲ್ಲಿ ಆ ದೃಶ್ಯವನ್ನು ಕೈಬಿಟ್ಟಿರುವುದು ಯಾಕೆ ? ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.
ಆರಂಭದಲ್ಲೇ ಅನ್ಯಾಯಕ್ಕೊಳಗಾದ ಅಪ್ರತಿಮ ವೀರನಂತೆ ರಾವಣನ್ನು ಪರಿಚಯಿಸುತ್ತಾರೆ. ತನ್ನ ಕುಲದವರ ಉದ್ಧಾರಕ್ಕಾಗಿ ಬ್ರಹ್ಮನಲ್ಲಿ ತಪಸ್ಸು ಮಾಡಿ ವರ ಪಡೆದು ಮೂರು ಲೋಕಗಳನ್ನು ಅಧಿಪತ್ಯ ಸ್ಥಾಪಿಸುವಂತೆ ತೋರಿಸಿದ್ದಾರೆ. ಮಕ್ಕಳು ಸಿನಿಮಾ ನೋಡಿದ್ರೆ ರಾಮನಿಗಿಂತ ರಾವಣ ಗ್ರೇಟ್ ಎಂದುಕೊಳ್ಳುತ್ತಾರೆ. ಒಟ್ಟಾರೆ ಇಡೀ ಸಿನಿಮಾದಲ್ಲಿ ರಾವಣನನ್ನು ಮೆರೆಸುವ ಕೆಲಸ ಮಾಡಿದ್ದಾರೆ. ಇದು ಸರೀನಾ ? ಎಂದು ಚರ್ಚೆ ಜೋರಾಗಿದೆ.
ಇಂದ್ರನನ್ನು ಬಹಳ ಸುಲಭವಾರಿ ರಾವಣ ಸೋಲಿಸಿದಂತೆ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. ಆದರೆ ಅಷ್ಟು ಸುಲಭವಾಗಿ ಇಂದ್ರ ಸೋಲು ಒಪ್ಪಿಕೊಳ್ಳುವುದಿಲ್ಲ. ರಾವಣನ ಮಗ ಇಂದ್ರಜಿತ್ ತನ್ನ ತಪಸ್ಸಿನ ಶಕ್ತಿಯಿಂದ ಇಂದ್ರನನ್ನು ಕಟ್ಟಿ ಹಾಕುತ್ತಾರೆ. ಅದಕ್ಕೆ ಅವನಿಗೆ ಇಂದ್ರಜಿತ್ ಎನ್ನುವ ಹೆಸರು ಬಂದಿದೆ. ಆದರೆ ಚಿತ್ರದಲ್ಲಿ ಇಂದ್ರಜಿತ್ನನ್ನು ಸಿನಿಮಾ ಕೊನೆಯಲ್ಲಿ ಮಾತ್ರ ತೋರಿಸುತ್ತಾರೆ ಎನ್ನುವುದು ಕೆಲವರ ವಾದ. ಆದರೆ ಇಂದ್ರನ ವಿರುದ್ಧ ರಾವಣ ಮೂರ್ನಾಲ್ಕು ಬಾರಿ ಯುದ್ಧ ಮಾಡ್ತಾನೆ. ಆತನನ್ನು ಇಂದ್ರಜಿತ್ ಬಂಧಿಸುವುದು ಬೇರೆ ಸಂದರ್ಭದಲ್ಲಿ ಎನ್ನುವುದು ಇನ್ನು ಕೆಲವರ ಪ್ರತಿವಾದ.
ಯಶ್ ನಟನೆ ನೋಡಲು ಸಾಕಷ್ಟು ಜನ ಚಿತ್ರಮಂದಿರಕ್ಕೆ ಹೋಗುತ್ತಿದ್ದಾರೆ. ಹಾಗಾಗಿ ರಾವಣನ ಪಾತ್ರವನ್ನು ವಿಜೃಂಭಿಸಿ ತೋರಿಸಿದಂತೆ ನಮಗೆ ಭಾಸವಾಗಬಹುದು. ಇದು ಮೊದಲ ಭಾಗ ಮಾತ್ರ. ಎರಡನೇ ಭಾಗದಲ್ಲಿ ಸಾಕಷ್ಟು ವಿಚಾರಗಳು ಇರಲಿವೆ. 6 ಗಂಟೆ ಚಿತ್ರಕ್ಕೆ ಎಷ್ಟು ಬೇಕೋ ಅಷ್ಟು ಕಥೆಯನ್ನು ತೆಗೆದುಕೊಂಡು ಸಿನಿಮಾ ಮಾಡ್ತಿದ್ದಾರೆ. ಅದಕ್ಕೆ ತಕ್ಕಂತೆ ಸನ್ನಿವೇಶಗಳನ್ನು ಆರಿಸಿಕೊಂಡಿದ್ದಾರೆ. ಚಿತ್ರತಂಡ ಆರಂಭದಲ್ಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. "ಸಿನಿಮಾ ಮುಖ್ಯವಾಗಿ ವಾಲ್ಮೀಕಿ ರಾಮಾಯಣವನ್ನು ಆಧರಿಸಿದೆ ಹಾಗೂ ಇತರ ಆವೃತ್ತಿಗಳಿಂದಲೂ ಸ್ಫೂರ್ತಿ ಪಡೆದಿದೆ" ಹೇಳಿದ್ದಾರೆ. ಹಾಗಾಗಿ ಎಲ್ಲವನ್ನು ವಾಲ್ಮೀಕಿ ರಾಮಾಯಣದ ಜೊತೆ ಹೋಲಿಸಿ ನೋಡಬೇಡಿ ಎಂದು ಸಾಕಷ್ಟು ಜನ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ.