ರ್ಯಾಪರ್ ಚಂದನ್ ಶೆಟ್ಟಿ ತಮ್ಮ ವಿಭಿನ್ನ ಆಲ್ಬಮ್ ಸಾಂಗ್‌ಗಳ ಮೂಲಕ ಗಮನ ಸೆಳೆಯುತ್ತಾ ಬರ್ತಿದ್ದಾರೆ. ಅವರ ಲೇಟೆಸ್ಟ್ ಸಾಂಗ್ 'ಮೈಮಾಟದಾಟ' ಸಖತ್ ವೈರಲ್ ಆಗ್ತಿದೆ. ಆದರೆ ಮಾಜಿ ಪತ್ನಿ ನಿವೇದಿತಾ ಗೌಡ ಅವರಿಗೆ ಟಾಂಗ್ ಕೊಡಲು ಚಂದು ಈ ಸಾಂಗ್ ಮಾಡಿದ್ದಾರೆ ಎಂದು ಚರ್ಚೆ ನಡೀತಿದೆ. ಈ ಬಗ್ಗೆ ಖುದ್ದಾಗಿ ಪ್ರತಿಕ್ರಿಯೆ ನೀಡಿ ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ 'ಮೈಮಾಟ' ಸಾಂಗ್ ಆರಂಭದಲ್ಲೇ ಸ್ಪಷ್ಟೀಕರಣ ಹೇಳಿಕೆಯನ್ನು ಹಾಕಲಾಗಿದೆ. ಆದರೂ ಹಾಡಿನ ಸಾಹಿತ್ಯ ನಿವೇದಿತಾಗೆ ತಿವಿಯಲು ಬರೆದಂತಿದೆ ಎಂದು ಕೇಳುಗರು ಕಾಮೆಂಟ್ ಮಾಡ್ತಿದ್ದಾರೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪ್ರೀತಿಸಿ ಮದುವೆ ಆಗಿದ್ದೂ ಬಳಿಕ ದೂರಾಗಿದ್ದು ಗೊತ್ತೇಯಿದೆ. ಆ ಬಳಿಕ ನಿವ್ವಿ ಸೋಶಿಯಲ್ ಮೀಡಿಯಾದಲ್ಲಿ ಬಿಂದಾಸ್ ಅವತಾರ ತಾಳಿದ್ದಾರೆ. ಇದಕ್ಕೆ ಚಂದನ್ ಹಾಡಿನಲ್ಲಿ ತಿರುಗೇಟು ಕೊಟ್ಟಿದ್ದಾರೆ ಎನ್ನುವುದು ಬಹುತೇಕರ ಅಭಿಪ್ರಾಯ.

ಭಗ್ನ ಪ್ರೇಮಿಯ ನೋವಿನ ಸಾಂಗ್ ಇದು ಎನ್ನುವುದು ಗೊತ್ತಾಗುತ್ತದೆ. ಇನ್ನು 'ಮೈಮಾಟ' ಸಾಂಗ್ ಬೆನ್ನಲ್ಲೇ ನಿವೇದಿತಾ ಒಂದು ಪೋಸ್ಟ್ ಮಾಡಿದ್ದರು. 'ಹಳೆ ಭೂತ ನನ್ನ ಬಿಡುತ್ತಿಲ್ಲ' ಎಂದು ಬರೆದುಕೊಂಡಿದ್ದರು. ಚಂದನ್ ಶೆಟ್ಟಿಗೆ ಕೌಂಟರ್ ಕೊಟ್ಟಿದ್ದಾರೆ ಎಂದು ಚರ್ಚೆ ಆಗಿತ್ತು. ಇದೆಲ್ಲದರ ಬೆನ್ನಲ್ಲೇ ಚಂದನ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಎಲ್ಲರಿಗೂ ಒಂದು ಸಣ್ಣ ಸ್ಪಷ್ಟನೆ.. ನನ್ನ ಇತ್ತೀಚಿನ MAIMATA ಹಾಡಿನ ಆರಂಭದಲ್ಲೇ ತಿಳಿಸಿರುವಂತೆ, ಈ ಹಾಡನ್ನು ಕೇವಲ ಮನರಂಜನೆಗಾಗಿ ರಚಿಸಲಾಗಿದ್ದು, ಯಾರನ್ನೂ ನೋಯಿಸುವ ಅಥವಾ ಗುರಿಯಾಗಿಸುವ ಉದ್ದೇಶ ಹೊಂದಿಲ್ಲ. ನನ್ನ ವೈಯಕ್ತಿಕ ಜೀವನದಲ್ಲಿ ನಡೆದ ಕೆಲವು ಘಟನೆಗಳಿಗೂ ಮೊದಲೇ ಈ ಹಾಡನ್ನು ಸಿದ್ಧಪಡಿಸಲಾಗಿತ್ತು. ಆದರೆ ಇತ್ತೀಚೆಗೆ ಕೆಲವು ಸುದ್ದಿ ಮಾಧ್ಯಮಗಳಲ್ಲಿ, ಯೂಟ್ಯೂಬ್ ಚಾನೆಲ್‌ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡನ್ನು ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಬಿಂಬಿಸಲಾಗುತ್ತಿದೆ. ಈ ಬಗ್ಗೆ ಅನೇಕ ಪ್ರಶ್ನೆಗಳು ಹಾಗೂ ಊಹಾಪೋಹಗಳು ಕೇಳಿಬರುತ್ತಿರುವುದರಿಂದ ಈ ಸ್ಪಷ್ಟನೆ ನೀಡುತ್ತಿದ್ದೇನೆ. ದಯವಿಟ್ಟು ಈ ಹಾಡನ್ನು ನನ್ನ ವೈಯಕ್ತಿಕ ಜೀವನದೊಂದಿಗೆ ಹೋಲಿಸಿ ಅನಗತ್ಯ ಊಹಾಪೋಹಗಳು ಹಾಗೂ ನಕಾರಾತ್ಮಕತೆಯನ್ನು ಹರಡಬೇಡಿ ಎಂದು ಎಲ್ಲರಲ್ಲೂ ವಿನಂತಿಸಿಕೊಳ್ಳುತ್ತೇನೆ" ಎಂದಿದ್ದಾರೆ.

ಒಟ್ಟಾರೆ 'ಮೈಮಾಟ' ಸಾಂಗ್ ಸಂಗೀತ ಪ್ರೇಮಿಗಳ ಮನಗೆದ್ದಿದೆ. ಚಂದನ್ ಶೆಟ್ಟಿ ಮ್ಯೂಸಿಕ್ ಮಾಡಿ, ಸಾಹಿತ್ಯ ಬರೆದು ಹಾಡಿ ಪರ್ಫಾರ್ಮ್ ಮಾಡಿದ್ದಾರೆ. ಸ್ವತಃ ಹಾಡನ್ನು ಕಂಪೋಸ್ ಮಾಡಿದ್ದಾರೆ.