ಗಣೇಶ್ ನಟನೆಯ 'ಬೃಂದಾವಿಹಾರಿ' ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. 'ಪಿನಾಕ' ಸಿನಿಮಾವನ್ನು ಪ್ರೇಕ್ಷಕರು ಮರೆತುಬಿಟ್ಟಿದ್ದಾರೆ. ಗೋಲ್ಡನ್ ಸ್ಟಾರ್ ನಟಿಸಿದ್ದ 'ಕೃಷ್ಣಂ ಪ್ರಣಯಸಖಿ' ಸಿನಿಮಾ ಬಂದು ಹೋಗಿ ಎರಡು ವರ್ಷ ಕಳೆದಿದೆ. ಇನ್ನು ಎರಡ್ಮೂರು ಸಿನಿಮಾಗಳು ತಡವಾಗ್ತಿದೆ. ಇದೆಲ್ಲದರ ನಡುವೆ ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ಗಣಿ ನಟಿಸ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.

'ಬ್ಯಾಡ್ ಮ್ಯಾನರ್ಸ್' ಬಳಿಕ 'ಕಾಗೆ ಬಂಗಾರ' ಚಿತ್ರವನ್ನು ಸೂರಿ ಕೈಗೆತ್ತಿಕೊಂಡಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿ ಸದ್ದು ಮಾಡ್ತಿದೆ. ಸೂರ್ಯ ಪ್ರಖ್ಯಾತ್ ಹಾಗೂ ರಿತನ್ಯಾ ವಿಜಯ್‌ಕುಮಾರ್ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ. ಒಂದೂವರೆ ತಿಂಗಳ ಹಿಂದೆ ಸರಳವಾಗಿ ಸಿನಿಮಾ ಸೆಟ್ಟೇರಿತ್ತು. ಚಿತ್ರದ ಮುಹೂರ್ತ ಸಮಾರಂಭಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಹಾಜರಾಗಿದ್ದರು.

ಒಂದ್ಕಾಲದಲ್ಲಿ ಯೋಗರಾಜ್ ಭಟ್ ಕ್ಯಾಂಪ್‌ನಲ್ಲಿ ಗಣೇಶ್ ಗುರ್ತಿಸಿಕೊಂಡಿದ್ದರು. ಆಗ ಸೂರಿ ಜೊತೆಗೂ ಒಡನಾಟ ಇತ್ತು. ಸೂರಿ ರಾ, ಮಾಸ್ ಸಿನಿಮಾಗಳನ್ನು ಮಾಡ್ತಾ ಬಂದವರು. ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾಗಳನ್ನು ಭಟ್ರು- ಗಣಿ ಮಾಡಿದ್ದು ಗೊತ್ತೇಯಿದೆ. ಹಾಗಾಗಿ ಸೂರಿ ಹಾಗೂ ಗಣೇಶ್ ಕಾಂಬೋ ಮಾತು ಬಂದೇ ಇರಲಿಲ್ಲ. ಆದರೆ 'ಕಾಗೆ ಬಂಗಾರ' ಚಿತ್ರದ ವಿಶೇಷ ಪಾತ್ರದಲ್ಲಿ ಮಳೆಹುಡುಗ ನಟಿಸ್ತಿದ್ದಾರೆ ಎನ್ನಲಾಗ್ತಿದೆ.

'ಕಾಗೆ ಬಂಗಾರ' ಕಥೆಯನ್ನು ಸೂರಿ ಮತ್ತೊಂದು ಚಿತ್ರದಲ್ಲಿ ಮುಂದುವರೆಸಲಿದ್ದು ಅದಕ್ಕೆ ಲಿಂಕ್ ಕೊಡುವ ಸನ್ನಿವೇಶ ಈ ಚಿತ್ರದಲ್ಲಿ ಇರಲಿದೆ ಎನ್ನುವ ಊಹಾಪೋಹ ಶುರುವಾಗಿದೆ. 'ಕಾಗೆ ಬಂಗಾರ' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬಂದು ಗಣಿ ಸರ್ಪ್ರೈಸ್ ಕೊಡ್ತಾರೆ ಎನ್ನಲಾಗ್ತಿದೆ. 'ಕಬ್ಜ' ಚಿತ್ರದ ಕೊನೆಗೆ ಶಿವಣ್ಣ ಬಂದು ಮ್ಯಾಜಿಕ್ ಮಾಡಿದ್ದು ಗೊತ್ತೇಯಿದೆ. ಅದೇ ರೀತಿ ಗಣಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂದು ಗುಲ್ಲಾಗಿದೆ. ಇದೇ ಕಾರಣಕ್ಕೆ ಅವರು ಚಿತ್ರದ ಮುಹೂರ್ತ ಸಮಾರಂಭಕ್ಕೂ ಬಂದಿದ್ದರು ಎನ್ನುವ ಚರ್ಚೆ ನಡೀತಿದೆ. ಇದು ನಿಜವೋ ಸುಳ್ಳೋ ಶೀಘ್ರದಲ್ಲೇ ಗೊತ್ತಾಗಲಿದೆ.