ದುನಿಯಾ ಸೂರಿ ಈಸ್ ಬ್ಯಾಕ್. ಕೊನೆಗೂ 'ಕಾಗೆ ಬಂಗಾರ' ಸಿನಿಮಾ ತೆರೆಗೆ ಬರುವ ಸಮಯ ಬಂದಿದೆ. ದಶಕದ ಹಿಂದೆ ಘೋಷಣೆಯಾಗಿದ್ದ ಸಿನಿಮಾ ಇದೀಗ ಚಿತ್ರೀಕರಣದ ಅಂತರದಲ್ಲಿದೆ. ಸೂರ್ಯ ಪ್ರಖ್ಯಾತ್, ರಿತನ್ಯ ವಿಜಯ್ ಕುಮಾರ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಪ್ರಶಾಂತ್ ಸಿದ್ದಿ ಮತ್ತೊಂದು ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹರ್ಷಿತ್ ಆರ್ ಗೌಡ ನಿರ್ಮಾಣದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

ತಿಂಗಳ ಹಿಂದೆ ಸೂರಿ 'ಕಾಗೆ ಬಂಗಾರ' ಸಿನಿಮಾ ಆರಂಭಿಸಿದ್ದರು. ಈಗಾಗಲೇ ಒಂದಷ್ಟು ದೃಶ್ಯಗಳನ್ನು ಸೆರೆಹಿಡಿದು ಸಣ್ಣ ಝಲಕ್ ರಿವೀಲ್ ಮಾಡಿದ್ದಾರೆ. ಮತ್ತೊಮ್ಮೆ ಸೂರಿ ತಮ್ಮ ಸಿನಿಮ್ಯಾಟಿಕ್ ಯೂನಿವರ್ಸ್ ಒಳಗೆ ನೋಡುಗರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಚರಣ್‌ ರಾಜ್ ಬಿಜಿಎಂ ಹಿನ್ನೆಲೆಯಲ್ಲಿ ಸೂರಿ ಸ್ಟೈಲ್ ರಾ ದೃಶ್ಯಗಳು ಕುತೂಹಲ ಮೂಡಿಸುತ್ತಿದೆ. ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡ್ತಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.

'ದೊಡ್ಮನೆ ಹುಡ್ಗ' ಸಿನಿಮಾ ಮಾಡುವ ಸಮಯದಲ್ಲಿ 'ಕಾಗೆ ಬಂಗಾರ' ಎನ್ನುವ ಸಿನಿಮಾ ಮಾಡುವ ಪ್ರಯತ್ನ ಮಾಡಿದ್ದರು ಸೂರಿ. ಆದರೆ ದಿಢೀರನೆ ಅದರಲ್ಲಿದ್ದ 8 ದಿನಗಳ 'ಕೆಂಡ ಸಂಪಿಗೆ'- ಗಿಣಿ ಮರಿ ಕೇಸ್ ಕಥೆ ಇಷ್ಟವಾಗಿ ಅದನ್ನು ಮೊದಲಿಗೆ ತೆರೆಗೆ ತಂದಿದ್ದರು. ಆದರೆ ಮಾಡಲು ಹೊರಟಿದ್ದ 'ಕಾಗೆ ಬಂಗಾರ' ಚಿತ್ರ ಅಲ್ಲಿಗೆ ನಿಂತು ಹೋಗಿತ್ತು. ಬಳಿಕ 'ಟಗರು' ಹಿಂದೆ ಬಿದ್ದ ಸೂರಿ ಕೊನೆಗೆ 'ಪಾಪ್‌ಕಾರ್ನ್ ಮಂಕಿಟೈಗರ್' ಸಿನಿಮಾ ಕಟ್ಟಿಕೊಟ್ಟಿದ್ದರು. ಅದಕ್ಕೂ 'ಕಾಗೆ ಬಂಗಾರ' ಕಥೆಯನ್ನು ತಳಕು ಹಾಕಿದ್ದರು. ಹೀಗೆ ತಮ್ಮದೇ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಮೂರು ಕಥೆಗಳನ್ನು ಸೇರಿಸಿದ್ದರು. ಇದೀಗ ಅಸಲಿ 'ಕಾಗೆ ಬಂಗಾರ'ವನ್ನು ತೆರೆಮೇಲೆ ತರಲು ಹೊರಟಿದ್ದಾರೆ.

ಸೂರಿ ಕನಸಿನ ಸಿನಿಮಾ 'ಕಾಗೆ ಬಂಗಾರ'. ಹಾಗಾಗಿ ಅಭಿಮಾನಿಗಳಲ್ಲಿ ಕೂಡ ಬಹಳ ನಿರೀಕ್ಷೆಯಿದೆ. ಸಣ್ಣ ಟೀಸರ್‌ನಿಂದಲೇ ಸಿನಿಮಾ ಹವಾ ಎಬ್ಬಿಸಿದೆ. ಅಂದಹಾಗೆ ಕೆಂಡ ಸಂಪಿಗೆ ಹಾಗೂ ಪಾಪ್‌ಕಾರ್ನ್‌ ಮಂಕಿಟೈಗರ್ ಮುಂದುವರೆದ ಭಾಗ ಇದು. ಸೂರಿ ಟ್ರಿಲಜಿಯ ಹೊಸ ಅಧ್ಯಾಯ.. ಸತ್ಯ ಮತ್ತು ಸುಳ್ಳಿನ ನಡುವೆ ಭ್ರಮೆ ಹುಟ್ಟಿಸುವುದು 'ಕಾಗೆಬಂಗಾರ' ಎಂದು ಸೂರಿ ಹೇಳಿದ್ದಾರೆ.

GP ಫೀಚರ್ಸ್ ಹಾಗೂ ಹೆಚ್‌ಆರ್‌ಜಿ ಪ್ರೊಡಕ್ಷನ್ಸ್ ಜಂಟಿಯಾಗಿ 'ಕಾಗೆಬಂಗಾರ' ಚಿತ್ರ ನಿರ್ಮಾಣ ಮಾಡ್ತಿವೆ. ಸುರೇಂದ್ರನಾಥ್ ಹಾಗೂ ಆಮ್ರಿ ಕೇಸರಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಆಮ್ರಿ ಕೇಸರಿ ಜೊತೆ ಸೇರಿ ಸೂರಿ ಸಂಭಾಷಣೆ ರಚಿಸಿದ್ದಾರೆ. ನಟೇಶ್ ಹೆಗ್ಡೆ, ನಂದಕಿಶೋರ್, ಅಶ್ವಿನ್‌ ಕುಮಾರ್, ಮಲ್ಲ, ಪವನ್ ನಾಗೇಶ್ ತಾರಾಗಣದಲ್ಲಿದ್ದಾರೆ. ಶೇಖರ್ ಎಸ್. ಛಾಯಾಗ್ರಹಣ, ದೀಪು ಎಸ್‌ ಕುಮಾರ್ ಸಂಕಲನ ಚಿತ್ರಕ್ಕಿದೆ.