ಆರ್‌. ಚಂದ್ರು ನಿರ್ಮಾಣದ ಫಾದರ್ ಸಿನಿಮಾ ಡಿಸೆಂಬರ್ 4ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಏಕಕಾಲಕ್ಕೆ ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ತರಲು ಚಿತ್ರತಂಡ ಮನಸ್ಸು ಮಾಡಿದೆ. ಹಾಗಾಗಿ ಕೊಂಚ ತಡವಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತದೆ ಎಂದು ಆರ್‌. ಚಂದ್ರು ಮಾಹಿತಿ ನೀಡಿದ್ದಾರೆ.

ಟೈಟಲ್ ಹೇಳುವಂತೆ ಇದು ತಂದೆ-ಮಗನ ಬಾಂಧವ್ಯದ ಕಥೆ. ರಾಜಮೋಹನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಕಾಶ್ ರಾಜ್ ಮಗನ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಸಾಂಗ್ಸ್ ಸದ್ದು ಮಾಡ್ತಿವೆ. ಮಂಜು ಮಾಂಡವ್ಯ ಚಿತ್ರಕ್ಕೆ ಕಥೆ ಬರೆದಿದ್ದು ನಕುಲ್ ಅಭ್ಯಂಕರ್ ಸಂಯೋಜನೆ ಮಾಡಿದ್ದಾರೆ. ಅಮೃತಾ ಅಯ್ಯಂಗಾರ್, ನಾಗಭೂಷಣ್, ಅವಿನಾಶ್, ರಮೇಶ್ ಇಂದಿರಾ, ಹೊನ್ನವಳ್ಳಿ ಕೃಷ್ಣ ಚಿತ್ರದ ತಾರಾಗಣದಲ್ಲಿದ್ದಾರೆ.

ಟೀಸರ್‌ನಿಂದಲೇ 'ಫಾದರ್' ಸಿನಿಮಾ ಕುತೂಹಲ ಮೂಡಿಸಿತ್ತು. 2024ರ ಏಪ್ರಿಲ್‌ನಲ್ಲಿ ಸಿನಿಮಾ ಸೆಟ್ಟೇರಿತ್ತು. ಶಿವರಾಜ್​ಕುಮಾರ್​, ಗೀತಾ ಶಿವರಾಜ್​ಕುಮಾರ್​, ಪ್ರದೀಪ್ ಈಶ್ವರ್, ಎಚ್.ಎಂ. ರೇವಣ್ಣ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದರು. ಆರ್.ಸಿ. ಸ್ಟುಡಿಯೋಸ್ ಸಂಸ್ಥೆಯ ಮೂಲಕ ಆರ್‌. ಚಂದ್ರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಿಂದಿ ಸೇರಿದಂತೆ ಇತರೆ ಭಾಷೆಗಳಲ್ಲಿ ಡಬ್ಬಿಂಗ್ ಕೆಲಸ ನಡೀತಿದೆ. ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಅನುಮಾನ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ. ಶೀಘ್ರದಲ್ಲೇ ಅಧಿಕೃತವಾಗಿ ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಆರ್‌. ಚಂದ್ರು ತಿಳಿಸಿದ್ದಾರೆ.